ಚಾಮರಾಜನಗರ: ಒಂದು ಆಸ್ಪತ್ರೆಯಲ್ಲಿ ಯುವಕನಿಗೆ ಕೋವಿಡ್ ಪಾಸಿಟಿವ್ ಬಂದಿದ್ದರೆ, ಮತ್ತೊಂದರಲ್ಲಿ ನೆಗೆಟಿವ್ ಬಂದಿದೆ. ಈ ಗೊಂದಲದ ಫಲಿತಾಂಶದಿಂದಾಗಿ ಇಂಟರ್‌ವ್ಯೂ ತಪ್ಪಿಸಿಕೊಂಡು ಯುವಕ ನೆಚ್ಚಿನ ಉದ್ಯೋಗ ಕಳೆದುಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂಕಹಳ್ಳಿ ಗ್ರಾಮದ ಸುಮಂತ್ ಎಂಬ ಡಿಪ್ಲೊಮಾ ಪದವೀಧರ ಪ್ರತಿಷ್ಟಿತ ಕಂಪನಿಯೊಂದಕ್ಕೆ ಉದ್ಯೋಗ ಅರಸಿ ಅರ್ಜಿ ಹಾಕಿದ್ದರು. ಸಂದರ್ಶನಕ್ಕೆ ಹಾಜರಾಗಲು ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದಾರೆ. ಸೋಮವಾರ ಬೆಳಗ್ಗೆ 10ರ ಸುಮಾರಿಗೆ ಇವರ ಮೊಬೈಲ್ಗೆ ಪಾಸಿಟಿವ್ ಎಂದು ಸಂದೇಶ ಬಂದಿದೆ.
ಇದರಿಂದ ವಿಚಲಿತರಾದ ಸುಮಂತ್ ತನ್ನ ತಂದೆಯ ಜೊತೆ ಗ್ರಾಮದ ಹತ್ತಿರದಲ್ಲಿರುವ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ 11ರ ಸುಮಾರಿಗೆ ಮತ್ತೆ ಗಂಟಲು ದ್ರವ ಕೊಟ್ಟು ಗುಂಡ್ಲುಪೇಟೆ ಕೋವಿಡ್ ಕೇರ್ ಸೆಂಟರಿಗೆ ದಾಖಲಾಗಿದ್ದಾರೆ.

ಬೊಮ್ಮಲಾಪುರದಲ್ಲಿ ನಡೆದ ಪರೀಕ್ಷಾ ವರದಿಯಲ್ಲಿ ಕೋವಿಡ್ ನೆಗೆಟಿವ್ ಎಂದು ಬಂದಿದೆ. ಇದರಿಂದ ಗೊಂದಲದಲ್ಲಿ ಸಿಲುಕಿದ ಯುವಕ ಕೋವಿಡ್ ಕೇರ್ ಸೆಂಟರ್ನಲ್ಲಿರಲಾಗದೇ ಅತ್ತ ಸಂದರ್ಶನಕ್ಕೂ ಹೋಗದೆ ಉದ್ಯೋಗವಂಚಿತರಾದರು.
ಉನ್ನತ ವ್ಯಾಸಂಗ ಮಾಡಿರುವ ಸುಮಂತ್‌ಗೆ ಮೈಸೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಸೋಮವಾರ ಇಂಟರ್ ವ್ಯೂ ಇತ್ತು. ಅದರೆ, ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ಉದ್ಯೋಗ ಇಲ್ಲದಾಗಿದೆ ಎಂದು ಯುವಕ ಹಾಗು ಪಾಲಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕೋವಿಡ್ ತುರ್ತು ಪರಿಸ್ಥಿತಿ ತಲುಪಿದ್ರೆ ಮಾತ್ರ ಲಾಕ್‌ಡೌನ್: ಬಿಬಿಎಂಪಿ ಮುಖ್ಯ ಆಯುಕ್ತ