ಚಾಮರಾಜನಗರ: ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದ ವನ್ಯಜೀವಿ ಛಾಯಾಗ್ರಾಹಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ವಿಜಯ್ ಮಹಾಸಬ್ಡೆ(67) ಮೃತ ಛಾಯಾಗ್ರಾಹಕ. ಕಳೆದ ಮೂರು ದಿನಗಳಿಂದ ಜಂಗಲ್ ಲಾಡ್ಜ್ ರೆಸಾರ್ಟ್ನಲ್ಲಿ ತಂಗಿದ್ದ ಇವರು ಗುರುವಾರ ಬೆಳಗ್ಗೆ ಹತ್ತು ಜನರ ತಂಡದೊಂದಿಗೆ ಎರಡು ಜೀಪ್ಗಳಲ್ಲಿ ಸಫಾರಿಗೆ ತೆರಳಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದ್ದು, ಅಲ್ಲೇ ಇದ್ದ ಸಿಬ್ಬಂದಿ ಆ್ಯಂಬುಲೆನ್ಸ್ಗೆ ಕರೆ ಮಾಡಿ, ವೈದ್ಯರಿಗೆ ಮಾಹಿತಿ ನೀಡಿದರು. ಆದರೆ ವೈದ್ಯರು ಬರುವುದರೊಳಗೆ ಹೊಳಕಲ್ಲಾರೆ ಕ್ಯಾಂಪ್ ವಾಹನದಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು.
ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಮೃತದೇಹ ಇರಿಸಲಾಗಿದೆ.