ಚಾಮರಾಜನಗರ: ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆ ಬಂಡೀಪುರ ಅರಣ್ಯದ ಮೂಲೆಹೊಳೆ ಗಡಿಯಲ್ಲಿ ಪಶುಪಾಲನಾ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.
ಬಂಡೀಪುರ-ಸುಲ್ತಾನ್ ಬತ್ತೇರಿ ಹೆದ್ದಾರಿ ಬಳಿ ಮೂಲೆಹೊಳೆ ತಪಾಸಣಾ ಕೇಂದ್ರದ ಸಿಬ್ಬಂದಿ ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ಕೇರಳದಿಂದ ಬರುತ್ತಿರುವ ಕೋಳಿ ಮತ್ತು ಮೊಟ್ಟೆ ವಾಹನಗಳಿಗೆ ಔಷಧಿ ಸಿಂಪಡಿಸುತ್ತಿದ್ದಾರೆ.
ಗುಂಡ್ಲುಪೇಟೆ ಕಡೆಯಿಂದ ಕೇರಳಕ್ಕೆ ಕೋಳಿ ಹಾಗೂ ಮೊಟ್ಟೆ ತುಂಬಿದ ವಾಹನಗಳು ಹೋಗುವಾಗಲೂ ಸಹ ತಪಾಸಣೆ ಜೊತೆಗೆ ಕಡ್ಡಾಯವಾಗಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ತಪಾಸಣೆಗಾಗಿ ಪ್ರತಿ ದಿನ ಎರಡು ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದು ಎರಡು ದಿನಗಳಿಂದ ಕೋಳಿ, ಮೊಟ್ಟೆ ತುಂಬಿದ ವಾಹನಗಳು ಕೇರಳದಿಂದ ಬರುತ್ತಿಲ್ಲ. ಕೇರಳದಲ್ಲಿ ಹಕ್ಕಿ ಜ್ವರ ಕಡಿಮೆಯಾಗಿದೆ ಎನ್ನುವ ಆದೇಶ ಹೊರ ಬೀಳುವ ತನಕ ತಪಾಸಣೆ ನಡೆಸಲಾಗುತ್ತದೆ ಎಂದು ಪಶುಪಾಲನಾ ಇಲಾಖೆ ತಿಳಿಸಿದೆ.