ಕೊಳ್ಳೇಗಾಲ: ಇಲ್ಲಿನ ನಗರಸಭೆ ನೌಕರ ವರ್ಗ ಹಾಗೂ ಚುನಾಯಿತ ಪ್ರತಿನಿಧಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಚುನಾಯಿತ ಸದಸ್ಯರ ಒತ್ತಡಕ್ಕೆ ಬೇಸತ್ತ ನಗರಸಭೆ ಕೆಲ ನೌಕರರು ಜಿಲ್ಲಾಧಿಕಾರಿ ಎಂ.ಆರ್.ರವಿ ಅವರಿಗೆ ಸಾಮೂಹಿಕ ವರ್ಗಾವಣೆ ಕೋರಿ ಪತ್ರದ ಮುಖೇನ ಮನವಿ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಗರಸಭೆ ವ್ಯವಸ್ಥಾಪಕ ಬಿ.ಲಿಂಗರಾಜು, ಸಮುದಾಯ ಸಂಘಟನಾಧಿಕಾರಿ ಪರಶಿವಯ್ಯ, ದ್ವಿತೀಯ ದರ್ಜೆ ಸಹಾಯಕರಾದ ಜಯಚಿತ್ರ, ಪಿ.ಅಕ್ಷಿತ, ಆರ್.ರಾಜಲಕ್ಷ್ಮಿ, ಪ್ರದೀಪ್, ಮಾಣಿಕ್ಯರಾಜ್, ಕರವಸೂಲಿಗಾರ ಬಿ.ಸಿ ಆನಂದ್ ಕುಮಾರ್, ಡಿ ಗ್ರೂಪ್ ನೌಕರ ಶಿವಕುಮಾರ್, ಪ್ರಭಾಕರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಸಾಮೂಹಿಕ ವರ್ಗಾವಣೆ ಕೋರಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಪುರುಷ ಸಮಾಜದ ಮೂದಲಿಕೆಗಳಿಗೆ ಸೆಡ್ಡು ಹೊಡೆದ ನಾರಿ.. ಮಲೆ ಮಹದೇಶ್ವರ ಕಾಡು ಕಾಯುತ್ತಿರುವ ಧೀರೆ
ಪತ್ರದಲ್ಲಿ "ನಗರಸಭೆಯ ಪ್ರತಿ ನೌಕರರು 2-3 ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೂ ನಗರಸಭೆಯ ಸದಸ್ಯರು ಕೆಲಸವಾಗುತ್ತಿಲ್ಲವೆಂದು ಒತ್ತಡ ಹೇರುತ್ತಿದ್ದಾರೆ" ಎಂದು ದೂರಿದ್ದಾರೆ.