ಚಾಮರಾಜನಗರ: ಭೂ ಪರಿವರ್ತನೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅರಣ್ಯ ಇಲಾಖೆ ಗುಮಾಸ್ತನೊಬ್ಬ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ನಡೆದಿದೆ.
ಚಾಮರಾಜನಗರ ಅರಣ್ಯ ಕಚೇರಿಯಲ್ಲಿನ ಗುಮಾಸ್ತ ಪುಟ್ಟಸ್ವಾಮಿ ಸಿಕ್ಕಿಬಿದ್ದ ಸಿಬ್ಬಂದಿ. ಹರದನಹಳ್ಳಿಯ ರೈತ ಲಿಂಗರಾಜು ತಮ್ಮ ಜಮೀನಿನ ಭೂ ಪರಿವರ್ತನೆ ಮಾಡಿಕೊಡಲು ಅರ್ಜಿ ಸಲ್ಲಿಸಿದಾಗ ಈತ 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಇಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಲಿಂಗರಾಜು ಅವರಿಂದ 2500 ರೂ. ಪಡೆಯುವಾಗ ಎಸಿಬಿ ಇನ್ಸ್ಪೆಕ್ಟರ್ ದೀಪಕ್ ಅವರ ಕೈಗೆ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಣವನ್ನು ವಶಕ್ಕೆ ಪಡೆದು, ಆರೋಪಿ ಪುಟ್ಟಸ್ವಾಮಿಯನ್ನು ವಿಚಾರಣೆಗೊಳಪಡಿಸಿದ್ದಾರೆ.