ಗುಂಡ್ಲುಪೇಟೆ: ಪಟ್ಟಣದಲ್ಲಿ ಕೊರೊನಾ ವೈರಸ್ ಹರಡದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಎಂ.ಆರ್.ರವಿ ಮತ್ತು ಎಸ್ಪಿನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲಾಕ್ಡೌನ್ ನಡುವೆಯೂ ತೆರೆದಿರುವ ಬಿತ್ತನೆ ಬೀಜ, ಕ್ರಿಮಿನಾಶಕ ಔಷಧಿ ಅಂಗಡಿಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಬೇಕು. ಹೆಚ್ಚಿನ ಬೆಲೆಗೆ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಆಸ್ಪತ್ರೆ ಸುತ್ತ ಇರುವ ಅನೈರ್ಮಲ್ಯ ಕಂಡು ಆಸ್ಪತ್ರೆ ಆಡಳಿತಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಕೊರೊನಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ತೆರೆಯಬೇಕು. ಇದರ ಬಗ್ಗೆಯು ಕ್ರಮ ವಹಿಸಿಲ್ಲ. ಶೀಘ್ರದಲ್ಲೇ ಈ ಕುರಿತು ಕ್ರಮ ವಹಿಸಿ ಎಂದು ಸೂಚಿಸಿದರು.
ನಂತರ ಬಂಡೀಪುರದ ಕೆಕ್ಕನಹಳ್ಳ ಗಡಿಯ ಚೆಕ್ ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ತಹಸೀಲ್ದಾರ್ ನಂಜುಂಡಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ಸ್ಪೆಕ್ಟರ್ ಲತೇಶ್ ಕುಮಾರ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.