ಚಾಮರಾಜನಗರ: ಜುಲೈ 9ರಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರಿಗೆ ಪಡಿತರ ಕಿಟ್ ವಿತರಿಸುವಾಗ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೇ ಕೋವಿಡ್-19 ಶಿಷ್ಟಾಚಾರ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯ ಕೊಳ್ಳೇಗಾಲ ತಾಲೂಕು ಕಾರ್ಮಿಕ ನಿರೀಕ್ಷಕರಿಗೆ ಜಿಲ್ಲಾಧಿಕಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಕೊಳ್ಳೇಗಾಲದಲ್ಲಿ ಹಮ್ಮಿಕೊಂಡಿದ್ದ ಪಡಿತರ ಕಿಟ್ ವಿತರಣಾ ಕಾರ್ಯದಲ್ಲಿ ಯಾವುದೇ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಕಾರ್ಮಿಕರು ಮಾಸ್ಕ್ ಧರಿಸದೇ, ದೈಹಿಕ ಅಂತರ ಪಾಲನೆ ಮಾಡದೇ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜನದಟ್ಟಣೆ ಉಂಟಾಗಿ ವಿತರಣಾ ಕಾರ್ಯಕ್ರಮ ಅಸ್ತವ್ಯಸ್ತವಾಗಿದ್ದ ಕುರಿತು ಬಿತ್ತರಗೊಂಡ ಮಾಧ್ಯಮಗಳ ವರದಿ ಆಧರಿಸಿ ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಕೊಳ್ಳೇಗಾಲ ತಾಲೂಕು ಕಾರ್ಮಿಕ ನಿರೀಕ್ಷಕ ಚಂದ್ರು ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಕೋವಿಡ್ ಶಿಷ್ಟಾಚಾರ ಉಲ್ಲಂಘನೆಯಾಗಿರುವುದು ಕಂಡುಬಂದಿದ್ದು, ಇದನ್ನು ಜಿಲ್ಲಾಡಳಿತ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಲೋಪಕ್ಕೆ ನಿಮ್ಮ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಪ್ರಕಾರ ಏಕೆ ಕ್ರಮ ಜರುಗಿಸಬಾರದು ಎಂಬುದಕ್ಕೆ ನೋಟಿಸ್ ತಲುಪಿದ ಮೂರು ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿ ನೀಡಬೇಕು. ತಪ್ಪಿದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುವುದು. ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ವರದಿ ಕೊಡುವಂತೆ ಡಿಸಿ ಸೂಚಿಸಿದ್ದಾರೆ.
ಇದನ್ನೂ ಓದಿ: ಫುಡ್ ಕಿಟ್ಗಾಗಿ ಮುಗಿಬಿದ್ದ ಕಾರ್ಮಿಕರು : ಗುಂಪು ಚದುರಿಸಲು ಲಾಠಿ ಬೀಸಿದ ಪೊಲೀಸರು