ಚಾಮರಾಜನಗರ: ಸರಳ ದಸರಾದ ನೆಪದಲ್ಲಿ ತೀರಾ ಕಳಪೆಯಾಗಿ ನಗರಕ್ಕೆ ದೀಪಾಲಂಕಾರ ಮಾಡಿದ್ದಕ್ಕೆ ಜನಾಕ್ರೋಶ ವ್ಯಕ್ಯವಾದ ಹಿನ್ನೆಲೆಯಲ್ಲಿ ಎರಡೇ ದಿನಕ್ಕೇ ಚಾಮರಾಜನಗರ ಜಗಮಗ ಎನ್ನುತ್ತಿದೆ.
ಹೌದು, ಒಂದೇ ಲೈನ್ನಲ್ಲಿ ದೀಪದ ಸಾಲು ಹಾಕಿ ಅಂದ ಹೆಚ್ಚಿಸುವ ಬದಲು ಅಭಾಸದಂತೆ ಕಾಣುತ್ತಿದ್ದ ದೀಪಾಲಂಕಾರದ ಕುರಿತು ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರಿಗೆ ದೂರಿದ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆಯೇ ಅಚ್ಚುಕಟ್ಟಾಗಿ ವಿದ್ಯುತ್ ದೀಪ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿ ಅಂದ ಹೆಚ್ಚಿಸಿದ್ದಾರೆ.
ಖಾಸಗಿ ವ್ಯಕ್ತಿಗೆ ಗುತ್ತಿಗೆ ನೀಡಿದ್ದರ ಪರಿಣಾಮವೇ ಎಡವಟ್ಟಿಗೆ ಕಾರಣ ಎನ್ನಲಾಗುತ್ತಿದ್ದು, ಸಚಿವರ ಸೂಚನೆ ಮೇರೆಗೆ ದೀಪಾಲಂಕರದ ಹೊಣೆಯನ್ನು ಚೆಸ್ಕಾಂ ಹೊತ್ತಿದ್ದು, ಜಿಲ್ಲಾಡಳಿತ ಭವನ ಹಾಗೂ ಜೋಡಿ ರಸ್ತೆಯಲ್ಲಿ ಇಕ್ಕೆಲದಲ್ಲಿ ಹಾಕಿದ್ದ ದೀಪಗಳನ್ನು ತೆಗೆದು, ಹೊಸ ದೀಪಗಳನ್ನು ಅಳವಡಿಸಿದೆ.
ಅದರಂತೆ, ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ, ಜಿಲ್ಲಾಡಳಿತ ಭವನ ಹಾಗೂ ಸೆಸ್ಕ್ ಕಚೇರಿ ಹಾಗೂ ಪ್ರಮುಖ ವೃತ್ತಗಳಿಗೆ ವಿದ್ಯುತ್ ಅಲಂಕಾರ ಮಾಡುವ ಮೂಲಕ ಮಿಣಮಿಣ ಎನ್ನುತ್ತಿದ್ದ, ಚಾಮರಾಜನಗರ ಈಗ ಜಗಮಗ ಎನ್ನುತ್ತಿದೆ. ತಡವಾಗಿ ಚೆಸ್ಕಾಂಗೆ ಜವಾಬ್ದಾರಿ ವಹಿಸಿರುವುದರಿಂದ ಮಂಗಳವಾರ ಜೋಡಿರಸ್ತೆ ಮಧುನವನಗಿತ್ತಿಯಂತಾಗಲಿದೆ.