ಚಾಮರಾಜನಗರ : ಕರ್ನಾಟಕದ ಏಕೈಕ ಅರಿಶಿಣ ಮಾರುಕಟ್ಟೆ ಚಾಮರಾಜನಗರದಲ್ಲಿ ಕರ್ಕ್ಯೂಮಿನ್ ಪರೀಕ್ಷೆ ನಡೆಸುತ್ತಿಲ್ಲವಾದ್ದರಿಂದ ಕೋಟ್ಯಂತರ ರೂ. ವೆಚ್ಚದ ಪ್ರಯೋಗಾಲಯ ಇದ್ದೂ ಇಲ್ಲದಂತಾಗಿದೆ. ಇದರಿಂದಾಗಿ ಬರೀ ರೈತರ ಕೈ ಕೆಸರಾದ್ರೆ, ದಲ್ಲಾಳಿಗಳ ಬಾಯಿ ಮಾತ್ರ ಮೊಸರಾಗುತ್ತಿದೆ.
ಈ ಬಾರಿಯ ಬಜೆಟ್‌ನಲ್ಲಿ ಚಾಮರಾಜನಗರ ಅರಿಶಿನ ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಆದರೆ, ಈ ಹಿಂದೆಯೆ ಕೋಟ್ಯಂತರ ರೂ. ವೆಚ್ಚದಲ್ಲಿ ಅರಿಶಿನ ಮಾರುಕಟ್ಟೆ ನಿರ್ಮಾಣ ಮಾಡಿದ್ದು, ಕರ್ಕ್ಯೂಮಿನ್ ಪರೀಕ್ಷೆಗೆ ಲಕ್ಷಾಂತರ ರೂ. ಮೌಲ್ಯದ ಯಂತ್ರಗಳನ್ನು ತರಿಸಿದ್ದರೂ ಪ್ರಯೋಗಾಲಯ ನಿಷ್ಕ್ರಿಯವಾಗಿದೆ.
ಇದೀಗ ಅರಿಶಿನ ಮಾರಾಟ ಪ್ರಾರಂಭವಾಗಿದೆ. ರೈತರು ತಮ್ಮ ಅರಿಶಿನ ಕರ್ಕ್ಯೂಮಿನ್ ಪರೀಕ್ಷೆ ಮಾಡಿಸಬೇಕಾದರೆ ಮೈಸೂರಿನ ಸಿಎಫ್‌ಟಿಆರ್‌ಐ ಅಥವಾ ಬೆಂಗಳೂರಿನ ಐಐಎಚ್‌ಆರ್‌ಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿ ಕರ್ಕ್ಯೂಮಿನ್ ಪರೀಕ್ಷೆಗೆ ಎರಡರಿಂದ ಮೂರು ಸಾವಿರ ರೂ. ನೀಡಿ ಪರೀಕ್ಷೆ ಮಾಡಿಸಬೇಕಾಗಿರುವುದರಿಂದ ಹೆಚ್ಚಿನ ರೈತರು ಪ್ರಯೋಗಾಲಯಕ್ಕೆ ಹೋಗುವ ಮನಸ್ಸು ಮಾಡಲ್ಲ.
ಸರ್ಕಾರ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಚಾಮರಾಜನಗರ ಜಿಲ್ಲೆಯ ಬೆಳೆಯಾಗಿ ಅರಿಶಿನವನ್ನು ಆಯ್ಕೆ ಮಾಡಿದೆ. ಸರ್ಕಾರ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಆದರೆ, ಅರಿಶಿನ ಬೆಳೆದ ರೈತನಿಗೆ ಬೇಕಾದ ಸೂಕ್ತ ಮಾರುಕಟ್ಟೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಿಲ್ಲ.
ಅಷ್ಟೇ ಅಲ್ಲ, ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅರಿಶಿನ ಗ್ರೇಡಿಂಗ್ ಮತ್ತು ಕ್ಲೀನಿಂಗ್ ಯಂತ್ರವೂ ಕಾರ್ಯನಿವಹಿಸುತ್ತಿಲ್ಲ. 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅರಿಶಿನ ಕರ್ಕ್ಯೂಮಿನ್ ಪರೀಕ್ಷೆ ಕೇಂದ್ರದಲ್ಲೂ ಪ್ರಯೋಗ ನಡೆಯುತ್ತಿಲ್ಲ. ಇದರಿಂದಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಅರಿಶಿನ ಮಾರುಕಟ್ಟೆ ಇದ್ದೂ ಇಲ್ಲದಂತಾಗಿದೆ.
ಅರಿಶಿಣದಲ್ಲಿ ಕರ್ಕ್ಯೂಮಿನ್ ಅಂಶ ಹೆಚ್ಚಿದ್ದರಷ್ಟೇ ಹೆಚ್ಚು ಬೆಲೆ ಸಿಗಲಿದೆ. ಕರ್ಕ್ಯೂಮಿನ್ ಪ್ರಮಾಣದ ಆಧಾರದ ಮೇಲೆ ಅರಿಶಿನ ಬೆಲೆ ನಿಗದಿಯಾಗುತ್ತದೆ. ದುರಂತ ಅಂದರೆ ಕರ್ಕ್ಯೂಮಿನ್ ಪ್ರಯೋಗಾಲಯ ಇಲ್ಲದ ಪರಿಣಾಮ ಯಾವ ರೈತರು ಅರಿಶಿನ ಕರ್ಕ್ಯೂಮಿನ್ ಪ್ರಮಾಣ ಪರೀಕ್ಷೆ ಮಾಡಿಸಿ ಮಾರಾಟ ಮಾಡುತ್ತಿಲ್ಲ. ಅನಿವಾರ್ಯವಾಗಿ ಕೈಗೆ ಸಿಕ್ಕಷ್ಟು ಮೂರು ಕಾಸಿಗೆ ಅರಿಶಿನ ಮಾರಾಟ ಮಾಡುತ್ತಿದ್ದಾರೆ.
ಚಾಮರಾಜನಗರ ಎಪಿಎಂಸಿಯಲ್ಲಿ ಈ ಹಿಂದೆ ಕರ್ಕ್ಯೂಮಿನ್ ಪ್ರಯೋಗಾಲಯವನ್ನು ತಾತ್ಕಲಿಕವಾಗಿ ತೆರೆಯಲಾಗಿತ್ತು. ರೈತರು ಅರಿಶಿನ ತೆಗೆದುಕೊಂಡು ಬಂದು ಪ್ರಯೋಗಾಲಯಕ್ಕೆ ನೀಡುವ ಮೂಲಕ ಕರ್ಕ್ಯೂಮಿನ್ ಪರೀಕ್ಷೆ ಮಾಡಿಸುತ್ತಿದ್ದರು.
ಪ್ರತಿ ಗುರುವಾರ ಅರಿಶಿನ ಮಾರುಕಟ್ಟೆ ನಡೆಯುತ್ತಿತ್ತು. ಮೈಸೂರಿನಿಂದ ಕರ್ಕ್ಯೂಮಿನ್ ಪರೀಕ್ಷಕರು ಬರುತ್ತಿದ್ದರು. ಇದೀಗ ತಾತ್ಕಲಿಕ ಕರ್ಕ್ಯೂಮಿನ್ ಪ್ರಯೋಗಾಲಯ ಬಂದ್ ಆಗಿದ್ದು, ಕೂಡಲೇ ತೆರೆಯಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಈ ಕುರಿತು ಎಪಿಎಂಸಿ ಅಧ್ಯಕ್ಷ ನಾಗೇಂದ್ರ ಪ್ರತಿಕ್ರಿಯಿಸಿ, ರಾಜ್ಯದ 18 ಕಡೆ ಲ್ಯಾಬ್ ಟೆಕ್ನಿಶಿಯನ್ಗಳ ಕೊರತೆ ಇದೆ. ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದ್ದು ಸಂದರ್ಶನ ಪ್ರಕ್ರಿಯೆ ನಡೆಸುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಪ್ರಯೋಗಾಲಯ ಆರಂಭವಾಗುವುದು ಎಂದರು.