ಚಾಮರಾಜನಗರ : ನಾಡಹಬ್ಬ ದಸರಾ ಅಂಗವಾಗಿ ಚಾಮರಾಜನಗರದಲ್ಲಿ ಪಶು ಪಾಲನಾ ಇಲಾಖೆ ವತಿಯಿಂದ ಹಾಲು ಕರೆಯುವ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ರೈತರು ಭಾಗವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಹಾಲು ಕರೆಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.
ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ ವಿವಿಧ ತಾಲೂಕುಗಳಿಂದ 12 ಜನ ರೈತರು ತಮ್ಮ ಹಸುಗಳೊಂದಿಗೆ ಆಗಮಿಸಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮೇಲಾಜಿಪುರದ ವಿನಯ್ ಕುಮಾರ್, ಕಾಗಲವಾಡಿಯ ಮುರುಗೇಶ್ ದ್ವಿತೀಯ ಸ್ಥಾನ ಮತ್ತು ಮೂಡಲಪುರದ ಬಸವಣ್ಣ ತೃತೀಯ ಸ್ಥಾನವನ್ನು ಪಡೆದುಕೊಂಡರು. ನವೀನ್ 14 ನಿಮಿಷದಲ್ಲಿ 13.200 ಕೆಜಿ ಹಾಲನ್ನು ಕರೆದು, 15 ಸಾವಿರ ನಗದು ಪುರಸ್ಕಾರವನ್ನು ಪಡೆದರು. ಕಾಗಲವಾಡಿ ಗ್ರಾಮದ ಮುರುಗೇಶ್ 8.200 ಕೆಜಿ ಹಾಲು ಕರೆದು 10 ಸಾವಿರ ನಗದು ಬಹುಮಾನ ಮತ್ತು ಮೂಡಲಪುರ ಗ್ರಾಮದ ಬಸವಣ್ಣ 7.850 ಕೆಜಿ ಹಾಲು ಕರೆದು 5 ಸಾವಿರ ರೂಪಾಯಿ ಬಹುಮಾನ ಪಡೆದರು. ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಬಹುಮಾನವನ್ನು ವಿತರಿಸಲಾಯಿತು. ಉಳಿದ 9 ಮಂದಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಈ ಸಂಬಂಧ ಪ್ರತಿಕ್ರಿಯಿಸಿದ ಪಶು ಪಾಲನಾ ಇಲಾಖೆ ಉಪನಿರ್ದೇಶಕ ಡಾ. ಹನುಮೇಗೌಡ, ದಸರಾ ಸಂಬಂಧ ಜಿಲ್ಲಾ ಮಟ್ಟದ ಹಾಲು ಕರೆಯುವ ಸ್ಫರ್ಧೆಯನ್ನು ಹಮ್ಮಿಕೊಂಡಿದ್ದೆವು. 12 ರೈತರು ಬಹಳ ಉತ್ಸಾಹದಿಂದ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೂವರು ರೈತರಿಗೆ ನಗದು ಬಹುಮಾನ ನೀಡಲಾಗಿದೆ. ಅವರಿಗೆ ನಮ್ಮ ಪಶುಪಾಲನಾ ಇಲಾಖೆ ವತಿಯಿಂದ ಅಭಿನಂದನೆಗಳನ್ನು ತಿಳಿಸಿದರು.
ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ರಾಸುಗಳ ಆರೋಗ್ಯ ಶಿಬಿರ, ಹಾಲು ಕರೆಯುವ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬರದ ಬೇಗೆಯಿಂದ ಅನ್ನದಾತರು ಕಂಗಾಲಾಗಿದ್ದು ಶೀಘ್ರ ಮಳೆಯಾಗಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.
ಪ್ರಥಮ ಬಹುಮಾನ ವಿಜೇತ ವಿನಯ್ಕುಮಾರ್ ಮಾತನಾಡಿ, ದಸರಾ ಹಬ್ಬದ ಹಿನ್ನೆಲೆ ಪಶುಪಾಲನಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಸಿಕ್ಕಿದೆ. ತುಂಬಾ ಖುಷಿಯಾಯಿತು. ಮುಂದಿನ ವರ್ಷವೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ರೈತರಿಗೂ ಅನುಕೂಲವಾಗುತ್ತದೆ. ಸ್ವಲ್ಪ ಪ್ರಚಾರದ ಕೊರತೆಯಿಂದ ಕಡಿಮೆ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಚಾರ ನೀಡಿದರೆ ಹೆಚ್ಚಿನ ರೈತರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. 14 ನಿಮಿಷದಲ್ಲಿ 13 ಕೆಜಿ ಹಾಲು ಕರೆದಿದ್ದೇನೆ. ಕಳೆದ ನಾಲ್ಕಾರು ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ : ಆಹಾರ ದಸರಾದಲ್ಲಿ ಬುಡಕಟ್ಟು ಜನಾಂಗದ 'ಬಂಬೂ ಬಿರಿಯಾನಿ' ಘಮ