ಚಾಮರಾಜನಗರ: ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಒಳಗಾಗಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.
ಹನೂರು ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿಗೆ ಕೋವಿಡ್ ದೃಢಪಟ್ಟಿದೆ. ಶಾಲೆಗಳು ಪ್ರಾರಂಭವಾಗುವ ಮುನ್ನ ಎಲ್ಲ ವಿದ್ಯಾರ್ಥಿಗಳ ಕೋವಿಡ್ ನೆಗೆಟಿವ್ ರಿಪೋರ್ಟ್ ಪಡೆದೇ ಶಾಲೆಗೆ ದಾಖಲು ಮಾಡಿಕೊಳ್ಳಲಾಗಿತ್ತು.
ಆದರೆ, ಕಳೆದ ಒಂದು ವಾರದ ಹಿಂದೆ ಕೆಲ ವಿದ್ಯಾರ್ಥಿಗಳಲ್ಲಿ ನೆಗಡಿ, ಕೆಮ್ಮು, ಶೀತ ಜ್ವರ ಕಂಡು ಬಂದ ಹಿನ್ನೆಲೆ ಹನೂರು ಪಟ್ಟಣದ ಕೋವಿಡ್ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದ ಸ್ವ್ಯಾಬ್ ಮಾದರಿಯಲ್ಲಿ 3 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿದೆ ಎಂದು ಬಿಇಒ ಸ್ವಾಮಿ ತಿಳಿಸಿದ್ದಾರೆ.
ಇನ್ನು, ಕಳೆದ ವಾರವಷ್ಟೇ ಯಳಂದೂರಿನ ಆದರ್ಶ ಶಾಲೆಯ ಇಬ್ಬರು ಬಾಲಕರು ಕೊರೊನಾ ಸೋಂಕಿಗೆ ಒಳಪಟ್ಟು ಸಂತೇಮರಹಳ್ಳಿ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮೊರಾರ್ಜಿ ಶಾಲೆ ವಿದ್ಯಾರ್ಥಿಗಳಲ್ಲೂ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.