ಚಾಮರಾಜನಗರ: ಕೊರೊನಾ ಮಹಾಮಾರಿ ಹಳ್ಳಿಗಳಲ್ಲೀಗ ವಿಪರೀತವಾಗಿ ವ್ಯಾಪಿಸುತ್ತಿರುವುದರಿಂದ ಯುವತಿಯರು ಕಳೆದ ನಾಲ್ಕೈದು ದಿನಗಳಿಂದ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿರುವ ಘಟನೆ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಪಚ್ಚೆದೊಡ್ಡಿಯಲ್ಲಿ ನಡೆದಿದೆ.
ಪಚ್ಚೆದೊಡ್ಡಿ ಗ್ರಾಮದ ನಂದಿನಿ, ವಿಜಯಲಕ್ಷ್ಮಿ, ಅಭಿನಯ ಎಂಬ ಯುವತಿಯರು ಪಚ್ಚೆದೊಡ್ಡಿ, ಕಾಂಚಳ್ಳಿ ಗ್ರಾಮದ ಮನೆ ಮನೆಗೆ ತೆರಳಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅಂಗಡಿ-ಮುಂಗಟ್ಟುಗಳು, ಹಾಲಿನ ಡೈರಿಗಳು, ಅರಳಿಕಟ್ಟೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮೂರಿನಲ್ಲಿ ಮಹಾಮಾರಿ ಅಟ್ಟಹಾಸ ಮೆರೆಯದಂತೆ ಜನರು ಎಚ್ಚರದಿಂದ ಇರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ವಿಸ್ತರಣೆ ಬಗ್ಗೆ ಜೂನ್ 6ರ ವೇಳೆಗೆ ಅಂತಿಮ ತೀರ್ಮಾನ: ಬಿಎಸ್ವೈ
ನಿರಂತರ ತಲೆನೋವು, ವಿಪರೀತ ಸುಸ್ತು, ನೆಗಡಿ, ಜ್ವರ ಕಾಣಿಸಿಕೊಳ್ಳುತ್ತಿರುವವರ ಮಾಹಿತಿಯನ್ನು ಸಂಗ್ರಹಿಸಿ, ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡುವುದರ ಮೂಲಕ ಸಹಕರಿಸುತ್ತಿದ್ದಾರೆ. ಜತೆಗೆ ಲಸಿಕೆ ಹಾಕಿಸಿಕೊಳ್ಳುವಂತೆಯೂ ಉತ್ತೇಜಿಸುವ ಮೂಲಕ ಇವರು ಗಮನ ಸೆಳೆದಿದ್ದಾರೆ.
ಈ ಯುವತಿಯರ ತಂಡದ ಜತೆಗೆ ಕೆಲ ಯುವಕರು ಸೇರಿಕೊಂಡು ಗ್ರಾಮದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದು, ಮತ್ತಷ್ಟು ಕ್ರಿಯಾಶೀಲತೆಯಿಂದ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ಯುವತಿ ನಂದಿನಿ.