ಚಾಮರಾಜನಗರ: ಹೆತ್ತ ಮಗಳನ್ನೇ ಅತ್ಯಾಚಾರ ಮಾಡಿ, ಗರ್ಭಿಣಿ ಮಾಡಿದ್ದ ಕಾಮುಕ ತಂದೆಗೆ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿದೆ. ಚಾಮರಾಜನಗರ ಜಿಲ್ಲೆಯ 48 ವರ್ಷದ ತಂದೆ ಶಿಕ್ಷೆಗೊಳಗಾದ ಅಪರಾಧಿ. ಅಪ್ರಾಪ್ತ ಮಗಳನ್ನು ಈತ ಅತ್ಯಾಚಾರ ಎಸಗಿ, ಗರ್ಭಿಣಿ ಮಾಡಿದ್ದ ಈ ಸಂಬಂಧ ಚಾಮರಾಜನಗರ ಠಾಣೆಯೊಂದರಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿತ್ತು.
ವಾದ - ಪ್ರತಿವಾದ ಆಲಿಸಿ ನ್ಯಾ.ನಿಶಾರಾಣಿ ಅವರು, ವ್ಯಕ್ತಿಯ ಆರೋಪ ಸಾಬೀತಾಗಿದ್ದರಿಂದ 48 ವರ್ಷದ ಅಪರಾಧಿಗೆ ಆತನ ಜೀವಿತಾವಧಿ ತನಕ ಜೈಲುಶಿಕ್ಷೆ ವಿಧಿಸಿದ್ದಾರೆ. ಕೆ.ಯೋಗೇಶ್ ವಾದ ಮಂಡಿಸಿದ್ದರು. ಇನ್ನು, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರವು 6 ಲಕ್ಷ ರೂ. ಪರಿಹಾರವನ್ನು 30 ದಿನದೊಳಗಾಗಿ ಕೊಡಬೇಕೆಂದು ನ್ಯಾಯಾಧೀಶರು ಸೂಚನೆ ಕೊಟ್ಟಿದ್ದಾರೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪಿಗೆ 2ವರ್ಷ ಜೈಲು ಶಿಕ್ಷೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ ಚಾಮರಾಜನಗರ ಮಕ್ಕಳ ಸ್ನೇಹಿ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ವಿಧಿಸಿ ಜೂ.29ರಂದು ಆದೇಶ ಮಾಡಿತ್ತು. ಕೊಳ್ಳೇಗಾಲದ ನಿವಾಸಿ ಶಿವಕುಮಾರ್ ಶಿಕ್ಷೆಗೊಳಗಾದ ಅಪರಾಧಿ. ಶಿವಕುಮಾರ್, ಅಪ್ರಾಪ್ತ ಬಾಲಕಿಯನ್ನು ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಜೊತೆಗೆ, ಇದನ್ನು ಪ್ರಶ್ನಿಸಿದ ಬಾಲಕಿಯ ಪಾಲಕರಿಗೂ ಕೊಲೆ ಬೆದರಿಕೆ ಹಾಕಿದ್ದ.
ಘಟನೆ ಸಂಬಂಧ 2021ರ ಜನವರಿ 1 ರಂದು ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿವಕುಮಾರ್ ವಿರುದ್ಧ ಎಲ್ಲ ಆರೋಪಗಳು ಸಾಬೀತಾದ್ದರಿಂದ ನ್ಯಾ.ನಿಶಾರಾಣಿ ಅಪರಾಧಿಗೆ 2 ವರ್ಷ ಶಿಕ್ಷೆ ವಿಧಿಸಿ, ಸಂತ್ರಸ್ತ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರವು 2 ಲಕ್ಷ ರೂ. ಹಣವನ್ನು ಪರಿಹಾರ ರೂಪದಲ್ಲಿ ಕೊಡಬೇಕು ಎಂದು ಸೂಚಿಸಿದ್ದರು.
ಗದಗದಲ್ಲೂ ಆರೋಪಿಗೆ 20 ವರ್ಷ ಶಿಕ್ಷೆ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಗದಗ ಜಿಲ್ಲಾ ನ್ಯಾಯಾಲಯ ಜು.18ರಂದು ತೀರ್ಪು ನೀಡಿತ್ತು. ಹೆಚ್ಚುವರಿ ಹಾಗೂ ಜಿಲ್ಲಾ ಸತ್ರ ನ್ಯಾ.ರಾಜೇಶ್ವರ ಶೆಟ್ಟಿ ತೀರ್ಪು ಪ್ರಕಟಿಸಿದ್ದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಡ್ಡದ ಮಲ್ಲಾಪುರ ಗ್ರಾಮದ ಶಂಕರಗೌಡ ಶೇಖರಗೌಡ ಪಾಟೀಲ್ ಶಿಕ್ಷೆ ವಿಧಿಸಲಾಗಿತ್ತು.
ಅಪ್ರಾಪ್ತೆ ಕುಡಿಯಲು ನೀರು ತರಲು ಹೋದಾ ವೇಳೆ ಜಮೀನಿಗೆ ಎಳೆದೊಯ್ದ ಅಪರಾಧಿ ಅತ್ಯಾಚಾರ ಹಾಗೂ ಹಲ್ಲೆ ನಡೆಸಿದ್ದ. 2019ರಲ್ಲಿ ಪ್ರಕರಣ ನಡೆದಿತ್ತು. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್‌ಗಳು ಹಾಗು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಸರ್ಕಾರದ ಪರವಾಗಿ ವಕೀಲ ಅಮರೇಶ ಹಿರೇಮಠ ವಾದ ಮಂಡಿಸಿದ್ದರು.