ಚಾಮರಾಜನಗರ: ಒಂದೆಡೆ ಕೊರೊನಾ ಮುಕ್ತವಾಗುವತ್ತ ಜಿಲ್ಲೆ ದಾಪುಗಾಲು ಇಡುತ್ತಿದ್ದರೆ, ಮತ್ತೊಂದೆಡೆ ಕೋವಿಡ್ ಲಸಿಕೆ ಪಡೆದಿದ್ದ ಐವರು ವೈದ್ಯರಿಗೆ ಮಹಾಮಾರಿ ವಕ್ಕರಿಸಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ಕುರಿತಂತೆ ಡಿಹೆಚ್ಒ ಡಾ.ರವಿ ಅವರು ಪ್ರತಿಕ್ರಿಯಿಸಿದ್ದಾರೆ.
ಕೆಲ ವೈದ್ಯರಿಗೆ ಲಸಿಕೆ ನೀಡಿದ 7 ದಿನಗಳ ಅಂತರದಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಲಸಿಕೆ ಪಡೆದ 7 ಮಂದಿ ವೈದ್ಯರಲ್ಲಿ ಐವರಿಗೆ ಸೋಂಕು ತಗುಲಿದೆ. ಈ ಪೈಕಿ ಓರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ನಾಲ್ವರು ಹೋಂ ಐಸೋಲೇಷನ್ನಲ್ಲಿದ್ದಾರೆ.
ಈ ಸಂಬಂಧ ವೈದ್ಯರೊಬ್ಬರು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ್ದು, ಆರಂಭದ ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ನಲ್ಲಿ ಕಾರ್ಯ ನಿರ್ವಹಿಸಿದ್ದೇವೆ. ಆದ್ರೆ ಆಗ ಬರದ ಕೊರೊನಾ ಈಗ ಬಂದಿದ್ದು, ನಮಗೂ ಒಂದು ರೀತಿ ಬೇಸರ ತರಿಸಿದೆ. ಸದ್ಯ ನಾವು ಆರೋಗ್ಯವಾಗಿದ್ದೇವೆ ಎಂದು ತಿಳಿಸಿದರು.
ಡಿಎಚ್ಒ ಹೇಳಿದಿಷ್ಟು :
ಜಿಲ್ಲೆಯಲ್ಲಿ ಐವರು ವೈದ್ಯರಿಗೆ ಕೊರೊನಾ ತಗುಲಿದೆ. ಇವರು ವ್ಯಾಕ್ಸಿನ್ ಪಡೆದಿದ್ದು ನಿಜ. ಆದರೆ ಇವರಿಗೆ ಕೊರೊನಾ ಬರುವುದಕ್ಕೂ, ಲಸಿಕೆ ಪಡೆದಿರುವುದಕ್ಕೆ ಯಾವುದೇ ಸಂಬಂಧ ಇಲ್ಲ. ಲಸಿಕೆ ಪಡೆದು ನಾಲ್ಕರಿಂದ ಐದು ವಾರಗಳಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಲು ಸಮಯ ಬೇಕಾಗುತ್ತದೆ. ಇಕ್ಯೂಪೇಷನ್ ಪೀರಿಡ್ನಲ್ಲಿದ್ದಾಗ ರೋಗ ಬರುವುದು ಸಹಜ. ಇವರಿಗೆ ಕೊರೊನಾ ಲಕ್ಷಣಗಳಿದ್ದು, ಪರೀಕ್ಷೆಗೆ ಒಳಪಟ್ಟಾಗ ದೃಢಪಟ್ಟಿದೆ. ಸೋಂಕಿತ ವೈದ್ಯರ ಸಂಪರ್ಕಿತರನ್ನು ಪರೀಕ್ಷೆ ಒಳಪಡಿಸಲಾಗುತ್ತದೆ ಎಂದರು.
ಲಸಿಕೆ ಪಡೆದ ಒಂದು ವಾರದಲ್ಲಿ ಈ ರೀತಿಯಾಗಿದೆ. ಇವರಿಗೆ ಲಕ್ಷಣಗಳಿದಿದ್ದರಿಂದ ಪರೀಕ್ಷೆಗೆ ಒಳಗಾದಾಗ ಕೊರೊನಾ ಸೋಂಕು ತಗುಲಿದೆ. ಲಸಿಕೆ ಪಡೆದು ಈ ವೈದ್ಯರು ಕರ್ತವ್ಯದಲ್ಲಿ ನಿರತರಾಗಿದ್ದು, ಈ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ವ್ಯಾಕ್ಸಿನ್ ತೆಗೆದುಕೊಂದಿದ್ದಕ್ಕೂ, ಕೊರೊನಾ ಬಂದಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ಇದರಿಂದ ಜನರು ಆತಂಕ ಪಡಬಾರದು. ಎಲ್ಲರೂ ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಬಹುದು ಎಂದು ಡಿಎಚ್ಒ ಧೈರ್ಯ ತುಂಬಿದರು.