ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ 11ಕ್ಕೇರಿದ್ದು, ಗುಂಡ್ಲುಪೇಟೆಯ ಕನಕದಾಸನಗರ (11ನೇ ವಾರ್ಡ್) ಓರ್ವನಿಗೆ ಹಾಗೂ ಕೊಳ್ಳೇಗಾಲದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಕಂ ಡ್ರೈವರ್ಗೆ ವೈರಸ್ ತಗುಲಿದೆ.
ಈ ಕುರಿತು ಈಟಿವಿ ಭಾರತಕ್ಕೆ ಉನ್ನತ ಮೂಲಗಳು ಖಚಿತಪಡಿಸಿದ್ದು, ಕೊಳ್ಳೇಗಾಲದ ಮಂಜುನಾಥ್ ನಗರದ ಬಸ್ ಚಾಲಕನಿಗೆ ವೈರಸ್ ತಗುಲಿದೆ. ಈತ ಕೊಳ್ಳೇಗಾಲ-ಬೆಂಗಳೂರು ಮಾರ್ಗದ ಬಸ್ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ, ಇಂದು ಕೂಡ ಅವರು ಬೆಂಗಳೂರಿಗೆ ಕರ್ತವ್ಯ ನಿರ್ವಹಿಸಿದ್ದು, ಅವರು ಬರುವುದನ್ನು ಕಾಯಲಾಗುತ್ತಿದೆ. ಇನ್ನು ಮಂಜುನಾಥ ನಗರವನ್ನು ಸೀಲ್ಡೌನ್ ಮಾಡಲಾಗಿದ್ದು ಕೊಳ್ಳೇಗಾಲದ ಜನರಲ್ಲಿ ಆತಂಕ ಮೂಡಿಸಿದೆ.
ಇನ್ನು, ಗುಂಡ್ಲುಪೇಟೆಯ ಕನಕದಾಸನಗರದಲ್ಲಿ ಓರ್ವನಿಗೆ ಕೊರೊನಾ ತಗುಲಿದ್ದು, ಈ ಮೂಲಕ ಗುಂಡ್ಲುಪೇಟೆ ಒಂದರಲ್ಲೇ ಪ್ರಕರಣಗಳ ಸಂಖ್ಯೆ 7ಕ್ಕೇರಿದೆ. ಇವರಲ್ಲಿ , ಮೂವರು ಚಾಲಕರು, ಚಾಲಕನೋರ್ವನ ಪತ್ನಿ, ಇಬ್ಬರು ಬೀಡಿಕಟ್ಟುವ ಮಹಿಳೆಯರು ಹಾಗೂ ಇಂದು ಓರ್ವನಿಗೆ ಕೊರೊನಾ ತಗುಲಿಕೊಂಡಿದೆ.
ಚಾಮರಾಜನಗರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್, ಭೂಮಾಪಕಿ, ಕೊಳ್ಳೇಗಾಲದಲ್ಲಿ ಕಂಡಕ್ಟರ್ ಹಾಗೂ ಗುಂಡ್ಲುಪೇಟೆಯಲ್ಲಿ 7 ಮಂದಿ ಸೇರಿದಂತೆ ಸಕ್ರಿಯ ಪ್ರಕರಣಗಳ ಸಂಖ್ಯೆ 10ಕ್ಕೇರಿದೆ, ಒಟ್ಟು 11 ಪ್ರಕರಣಗಳಾಗಿದೆ.