ಚಾಮರಾಜನಗರ: ಕಳಪೆ ಆಹಾರ ನೀಡುವ ಜೊತೆಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ ಕೊರೊನಾ ಸೋಂಕಿತರು ಪ್ರತಿಭಟಿಸಿದ ಘಟನೆ ತಾಲೂಕಿನ ಸಂತೇಮರಹಳ್ಳಿ ಕೋವಿಡ್ ಕೇರ್ ಸೆಂಟರಿನಲ್ಲಿ ನಡೆದಿದೆ.
ಕೋವಿಡ್ ಕೇರ್ ಸೆಂಟರಿನ ಅವ್ಯವಸ್ಥೆಗೆ ರೋಸಿ ಹೋಗಿ ಸೋಂಕಿತ ಪುರುಷರು ಹಾಗೂ ಮಹಿಳೆಯರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸೋಂಕಿತರನ್ನು ಸರಿಯಾಗಿ ತಪಾಸಣೆಗೂ ಒಳಪಡಿಸುವುದಿಲ್ಲ, ವೈದ್ಯರು 10 ನಿಮಿಷ ಇದ್ದರೆ ಹೆಚ್ಚೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ತೀರಾ ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿದ್ದು ತಿನ್ನಲಾಗುತ್ತಿಲ್ಲ.
ಶುಕ್ರವಾರ ರಾತ್ರಿ ಊಟವನ್ನು ಅರ್ಧದಷ್ಟು ಮಂದಿ ಮಾಡಿಲ್ಲ, ಸರ್ಕಾರ ಮೆನು ನೀಡಿದ್ದು ಅದರ ಪ್ರಕಾರ ನೀಡದಿದ್ದರೂ ತಿನ್ನಲಾಗುವಂತ ಆಹಾರವನ್ನಾದರೂ ಕೊಡಿ ಎಂದು ಸೋಂಕಿತರು ಅಳಲು ತೋಡಿಕೊಂಡಿದ್ದಾರೆ.
ಕೊರೊನಾ ಅಬ್ಬರ ಜಿಲ್ಲೆಯಲ್ಲಿ ಮುಂದುವರೆದಿದ್ದು, ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಈ ಪ್ರತಿಭಟನೆ ಜನರಲ್ಲಿ ಮತ್ತಷ್ಟು ಕಳವಳ ಮೂಡಿಸಿದೆ.