ಕೊಳ್ಳೇಗಾಲ : ಕೊರೊನಾ ಪಾಸಿಟಿವ್ ದೃಢಪಟ್ಟ ಸೋಂಕಿತರು ಕೋವಿಡ್ ಕೇರ್ ಸೆಂಟರ್‌ಗೆ ತೆರಳಲು ನಿರಾಕರಿಸುತ್ತಿದ್ದಾರೆ. ಟ್ರಯಾಜ್ ಟೆಸ್ಟ್ ಬಳಿಕ ಹೋಂ ಐಸೋಲೇಶನ್ ಆಗುತ್ತೇವೆ ಎಂದು ಪಟ್ಟು ಹಿಡಿಯುತ್ತಿರುವುದು ವೈದ್ಯರು ಹಾಗೂ ಅಧಿಕಾರಿಗಳಿಗೆ ತಲೆ ನೋವು ತಂದಿದೆ.
ಕೋವಿಡ್ ಪ್ರಕರಣ ಜಿಲ್ಲಾದ್ಯಂತ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕಳೆದ ನಾಲ್ಕು ದಿನದ ಹಿಂದೆಯಷ್ಟೇ ಸಚಿವ ಸುರೇಶ್ ಕುಮಾರ್ ಜಿಲ್ಲಾ ಮಟ್ಟದ ಟಾಸ್ಕ್ಪೋರ್ಸ್ ಸಭೆ ನಡೆಸಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲೇಬೇಕು.
ಇದರಿಂದ ಕೋವಿಡ್ ಹರುಡುವಿಕೆಗೆ ಕಡಿವಾಣ ಹಾಕಬಹುದಾಗಿದೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ತಾಲೂಕು ಟಾಸ್ಕ್ಪೋರ್ಸ್ಗಳಲ್ಲೂ ಅಧಿಕಾರಿಗಳ ಸಭೆ ಕರೆದು ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯಾ ಕ್ಷೇತ್ರದ ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಅದರಂತೆ ಕ್ರಮವಹಿಸಲು ಕೊರೊನಾ ಸೋಂಕಿತರು ಸ್ಪಂದಿಸಿದಿರುವುದು ಕಂಡು ಬಂದಿದೆ.
ಪಟ್ಟಣದ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯ ಟ್ರಯಾಜ್ ಸೆಂಟರ್ನಲ್ಲಿ ವೈದ್ಯರು ಮತ್ತು ಅಧಿಕಾರಿಗಳ ವಿರುದ್ಧ ವಾದಕ್ಕಿಳಿದ ಘಟನೆ ನಡೆದಿದ್ದು, ಕೊರೊನಾ ಸೋಂಕಿತರು ನಾವು ಹೋಂ ಐಸೋಲೇಷನ್ನಲ್ಲಿರುತ್ತೇವೆ.
ನಮಗೆ ಬೇಕಾದ ಔಷಧೋಪಚಾರ ನೀಡಿ ಸಾಕು. ಕೋವಿಡ್ ಕೇರ್ ಸೆಂಟರ್‌ಗೆ ನಾವು ಬರುವುದಿಲ್ಲ ಎಂದು ಅಲ್ಲಿನ ವೈದ್ಯರಿಗೆ ತಿಳಿಸಿ ವಾದಕ್ಕಿಳಿದಿದ್ದಾರೆ.
ವಿಚಾರ ತಿಳಿದ ತಹಶೀಲ್ದಾರ್ ಕುನಾಲ್ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಒಳ್ಳೆಯದಕ್ಕೆ ಕಳುಹಿಸುತ್ತಿರುವುದು. ಇದರಿಂದ ನಿಮ್ಮ ಕುಟುಂಬದವರೂ ಸೋಂಕಿನಿಂದ ಪಾರಾಗುತ್ತಾರೆ ಎಂದು ಬುದ್ಧಿ ಹೇಳಿದ್ರೂ ರೋಗಿಗಳು ಕೇಳಿಲ್ಲ. ಸರ್, ನಾವು ಮನೆಗೆ ತೆರಳಿ ಚಿಕಿತ್ಸೆ ಪಡೆಯುತ್ತೇವೆ, ನಮ್ಮನ್ನು ಬಿಟ್ಟು ಬಿಡಿ ಎಂದು ಒತ್ತಾಯಿಸಿದ ಪ್ರಸಂಗ ನಡೆದಿದೆ.
ದಯಮಾಡಿ ನಮ್ಮ ಮಾತು ಕೇಳಿ ಆ ರೀತಿ ಕಳುಹಿಸಲಾಗುವುದಿಲ್ಲ ಎಂದು ಅಧಿಕಾರಿ ವರ್ಗ ವಿನಂತಿ ಮಾಡಿದ್ರೂ ಕ್ಯಾರೇ ಎನ್ನದೆ ಓರ್ವ ಸೋಂಕಿತ ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರು ಹೆಚ್ಚಿರುವುದರಿಂದ ನಮಗೂ ಸೋಂಕು ಹೆಚ್ಚಾಗುತ್ತದೆ. ಆದ್ದರಿಂದ ಕೇರ್ ಸೆಂಟರ್‌ಗೆ ಹೋಗುವುದಿಲ್ಲ ಎಂದು ವಾದಿಸುತ್ತಿದ್ದರು.
ಸೋಂಕಿತರು ಕೋವಿಡ್ ಕೇರ್ ಸೆಂಟರ್‌ಗೆ ತೆರಳುವುದಕ್ಕೆ ಹಿಂದೇಟು ಹಾಕುತ್ತಿರುವುದು ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಸುಗಮ ಕೋವಿಡ್ ನಿರ್ವಹಣಾ ಕಾರ್ಯಕ್ಕೆ ಅಡಚಣೆಯಾಗುತ್ತಿದೆ.
ಈ ಬಗ್ಗೆ ಈಟಿವಿ ಭಾರತಕ್ಕೆ ತಹಶೀಲ್ದಾರ್ ಕುನಾಲ್ ಪ್ರತಿಕ್ರಿಯಿಸಿ, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಬೇಕೆಂಬ ಸೂಚನೆ ಇದ್ದು, ಅದರಂತೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ.
ಆದರೆ, ಸೋಂಕಿತರು ಮಾತ್ರ ಹೋಂ ಐಸೋಲೇಷನ್ ಆಗುತ್ತೇವೆ ಎಂದು ಟ್ರಯಾಜ್ ಕೇಂದ್ರದಲ್ಲಿ ವೈದ್ಯರ ಜೊತೆ ವಾದಕ್ಕಿಳಿಯುತ್ತಿರುವುದು ಸರಿಯಲ್ಲ.
ದಯಮಾಡಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮತ್ತು ನಿಮ್ಮವರ ಸುರಕ್ಷತೆ ದೃಷ್ಟಿಯಿಂದಲೇ ಕೋವಿಡ್ ಕೇರ್ ಸೆಂಟರ್ ತೆರಯಲಾಗಿದೆ. ಸರ್ಕಾರದ ನಿಯಮ ಪಾಲಿಸಿ ಕೋವಿಡ್ ಹರಡುವಿಕೆಗೆ ಕಡಿವಾಣ ಹಾಕಲು ಸಹಕರಿಸಿ ಎಂದು ತಿಳಿಸಿದ್ದಾರೆ.