ಚಾಮರಾಜನಗರ: ಕರ್ನಾಟಕ ಸರ್ಕಾರವು ಜಾತ್ರೆ, ರ‍್ಯಾಲಿಗಳು, ಹೆಚ್ಚು ಜನರು ಸೇರುವ ಸಮಾರಂಭಗಳಿಗೆ ನಿರ್ಬಂಧ ಹೇರಿರುವುದರಿಂದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬ್ರಹ್ಮ ರಥೋತ್ಸವದ ಮೇಲೆ ಕೊರೊನಾ ಎರಡನೇ ಅಲೆಯ ಕರಿಛಾಯೆ ಮೂಡಿದೆ.
ಇದೇ ಏ.6 ರಂದು ಗೋಪಾಲಸ್ವಾಮಿ ಬೆಟ್ಟದಲ್ಲಿ ಬ್ರಹ್ಮ ರಥೋತ್ಸವ ನಡೆಯಬೇಕಿದ್ದು ಏ.3 ರಿಂದ 9 ರ ತನಕ ವಿಶೇಷ ಪೂಜೆ,ಉತ್ಸವಗಳು ನಡೆಯಲಿದೆ. ಏ.6 ರಂದು ಬ್ರಹ್ಮ ರಥೋತ್ಸವ ನಡೆಯಬೇಕಿದೆ. ಆದರೆ, ಜಿಲ್ಲಾಡಳಿತದ ಕೇವಲ 100 ಮಂದಿಗಷ್ಟೇ ಅವಕಾಶ ನೀಡಿದೆ ಎನ್ನಲಾಗಿದೆ.
ಕೊರೊನಾ ಕಾರಣಕ್ಕಾಗಿಯೇ ಕಳೆದ ವರ್ಷವೂ ರಥೋತ್ಸವ ರದ್ದಾಗಿತ್ತು. ಈ ಬಾರಿಯಾದರೂ ಗೋಪಾಲಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಳ್ಳಬಹುದೆಂಬ ಭಕ್ತರ ಆಸೆಗೆ ಮತ್ತದೇ ಕೋವಿಡ್ ತಣ್ಣೀರೆರಚುವ ಸಾಧ್ಯತೆ ದಟ್ಟವಾಗಿದೆ. ಗೋಪಾಲಸ್ವಾಮಿ ರಥೋತ್ಸವಕ್ಕೆ ರಾಜ್ಯವಷ್ಟೇ ಅಲ್ಲದೇ ಕೇರಳ, ತಮಿಳುನಾಡಿನ ಸಹಸ್ರಾರು ಭಕ್ತರು ಪ್ರತಿವರ್ಷವೂ ಆಗಮಿಸುವುದರಿಂದ ಮಲೆಮಹದೇಶ್ವರ ಬೆಟ್ಟದ ಶಿವರಾತ್ರಿ ರಥೋತ್ಸವದಂತೆ ಸರಳ ಆಚರಣೆಯಷ್ಟೇ ನಡೆಯಬಹುದು ಎನ್ನಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಈ ಬೆಟ್ಟ ಭೂಮಿಯಿಂದ ಸುಮಾರು 1450 ಅಡಿ ಎತ್ತರದಲ್ಲಿದ್ದು ವರ್ಷದ ಎಲ್ಲಾ ದಿನವೂ
ತಂಪಾಗಿರುತ್ತದೆ. ಇನ್ನೊಂದು ವಿಶೇಷವೆಂದರೆ ಇಲ್ಲಿನ ರಥವನ್ನು ಹಂಬಿನಿಂದ ಎಳೆಯಲಿದ್ದು ಇವೆಲ್ಲವನ್ನೂ ಈ ಬಾರಿಯೂ ಭಕ್ತರು ಮಿಸ್ ಮಾಡಿಕೊಳ್ಳುವ ನಿರಾಸೆಯಲ್ಲಿದ್ದಾರೆ.
ಇದನ್ನೂ ಓದಿ:ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಪತ್ನಿ ಚನ್ನಮ್ಮಗೆ ಕೊರೊನಾ ಪಾಸಿಟಿವ್