ಚಾಮರಾಜನಗರ: ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳು ಒಟ್ಟಾಗಿ ಕುಳಿತು ಚರ್ಚಿಸಲು, ಅಧ್ಯಯನ ನಡೆಸಲು ಹಾಗು ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಮುಖ್ಯಾಂಶಗಳ ಬಗ್ಗೆ ವಿಷಯ ವಿನಿಮಯ ಮಾಡಿಕೊಳ್ಳುವುದಕ್ಕೆಲ್ಲಾ ಕೊರೊನಾ ಕಡಿವಾಣ ಹಾಕಿದೆ.
ಕೋವಿಡ್ ಸಂಕಷ್ಟದ ನಡುವೆ ಇಂದು ನಡೆದ ಪಿಯು ಇಂಗ್ಲಿಷ್ ಪರೀಕ್ಷೆಯಲ್ಲಿ ಜಿಲ್ಲೆಯ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಓದಲು ತೊಡಗಿಕೊಂಡಿದ್ದು ಕಂಡುಬಂತು. ಸ್ಕ್ರೀನಿಂಗ್ ಮಾಡುವ ಉದ್ದೇಶದಿಂದ ಬೆಳಗ್ಗೆ 10.30ಕ್ಕೆ ಶುರುವಾಗಲಿದ್ದ ಪರೀಕ್ಷೆಗೆ ವಿದ್ಯಾರ್ಥಿಗಳು 8.30ಕ್ಕೆ ಬಂದಿದ್ದರಿಂದ ಒಂದೂವರೆ ತಾಸಿಗೂ ಹೆಚ್ಚು ಸಮಯ ವಿದ್ಯಾರ್ಥಿಗಳು ನಡುವೆ ಅಂತರವಿಟ್ಟುಕೊಂಡೇ ಚರ್ಚಿಸಿ, ಮುಖ್ಯವಾದ ಪಠ್ಯಗಳನ್ನು ರಿಕಾಲ್ ಮಾಡಿಕೊಂಡರು.
ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಆಕಾಶ್ ಮಾತನಾಡಿ, ಇದೊಂದು ಹೊಸ ರೀತಿಯ ಪರೀಕ್ಷೆಯಾಗಿದೆ, ಹಿಂದೆಲ್ಲಾ ಒಟ್ಟಾಗಿ ಬರುತ್ತಿದ್ದೆವು, ಕೂರುತ್ತಿದ್ದೆವು. ಆದರೀಗ ಹಾಗಿಲ್ಲ, ದೂರವೇ ಕುಳಿತು ಸಂವಹನ ನಡೆಸುತ್ತೇವೆ, ಏಕಾಂಗಿಯಾಗಿ ಕೂರುವುದರಿಂದ ಓದಿದ ವಿಷಯಗಳನ್ನು ಮನನ ಮಾಡಿಕೊಳ್ಳಲು ಹೆಚ್ಚು ಸಮಯವೂ ಸಿಗುತ್ತಿದೆ ಎಂದರು.
ಇಂಗ್ಲಿಷ್ ಪರೀಕ್ಷೆಗೆ ಓದಲು ಹೆಚ್ಚು ಸಮಯ ಸಿಕ್ತು. ಉತ್ತಮವಾಗಿ ಪರೀಕ್ಷೆ ಬರೆಯುವ ವಿಶ್ವಾಸ ಬಂದಿದೆ. ಓದಲು ಕೊರೊನಾ ಹೆಚ್ಚು ಸಮಯವನ್ನೇ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಚರ್ಚೆ ನಡೆಸುತ್ತೇವೆ ಅನ್ನೋದು ಪರೀಕ್ಷಾರ್ಥಿ ರಾಜು ಅಭಿಪ್ರಾಯ.
ಬಹುಪಾಲು ವಿದ್ಯಾರ್ಥಿಗಳು ಮನೆಯಿಂದ ಬರುವಾಗಲೇ ಮಾಸ್ಕ್ ಧರಿಸಿ ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ನಡುವೆ ಅಂತರ ಮಂತ್ರವನ್ನು ಸ್ವಯಂಪ್ರೇರಣೆಯಿಂದ ಪಾಲಿಸಿರುವುದು ವಿದ್ಯಾರ್ಥಿಗಳ ಅರಿವಿಗೆ ಸಾಕ್ಷಿಯಾಗಿದೆ.