ಚಾಮರಾಜನಗರ: ಲಾಕ್ಡೌನ್ ವೇಳೆ ರಸ್ತೆಗಿಳಿದ ವಾಹನಗಳನ್ನು ಸೀಜ್ ಮಾಡಿದರೆ ಪ್ರಯಾಣಿಕರು ನಾವೇ ಕೋವಿಡ್ ಸೋಂಕಿತರು ಎನ್ನುತ್ತಿದ್ದಾರೆ. ಇದರಿಂದ ಪೊಲೀಸರಿಗೆ ಆತಂಕ ಎದುರಾಗಿದ್ದು, ಆರೋಗ್ಯ ಸಿಬ್ಬಂದಿಯನ್ನೇ ಕರೆಸಿ ಎನ್ನುತ್ತಿದ್ದಾರೆ.
ಚಾಮರಾಜನಗರದಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿ ಹೋಮ್ ಐಸೋಲೇಷನ್ನಲ್ಲಿರುವ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗೆ ಬಂದು ಮಾತ್ರೆ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದಾರೆ. ಹೀಗಾಗಿ, ಸೋಂಕಿತ ವ್ಯಕ್ತಿಗಳು ಸಿಕ್ಕಿದ ಆಟೋ, ಬೈಕ್, ಕಾರುಗಳಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಬೈಕ್ಗಳಲ್ಲಿ ತೆರಳುವ ಕೆಲ ಸೋಂಕಿತರು ಪತ್ನಿ, ಮಕ್ಕಳನ್ನು ಕೂಡ ಜೊತೆಗೆ ಕರೆದುಕೊಂಡು ಹೋಗುತ್ತಿವುದು ಆತಂಕಕ್ಕೆ ಕಾರಣವಾಗಿದೆ.
ಇಂದು ಚಾಮರಾಜನಗರದ ಮಂಗಳ ಗ್ರಾಮದ ಕೋವಿಡ್ ಸೋಂಕಿತ ತಾಯಿ-ಮಗನ ಜೊತೆ ಆಟೋದಲ್ಲಿ ಇಡೀ ಮನೆಯವರು ಬಂದಿದ್ದರು. ವಾಹನವನ್ನು ತಡೆದು ನಿಲ್ಲಿಸಿದ ಪೊಲೀಸರು, ಇವರ ಕಥೆ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಇದೇ ರೀತಿ ಇನ್ನೂ ಹಲವರು ಒಟ್ಟಿಗೆ ಓಡಾಡುತ್ತಿರುವುದು ಪೊಲೀಸರು ವಾಹನ ನಿಲ್ಲಿಸಲು ಹೆದರುವಂತಾಗಿದೆ.
ಹತ್ತಿರ ಹೋಗದಿದ್ದರೆ ವಾಹನ ನಿಲ್ಲಿಸುವುದಿಲ್ಲ. ಹತ್ತಿರ ಹೋದರೆ ಎಲ್ಲಿ ಸೋಂಕಿರು ಇರುತ್ತಾರೋ ಎಂಬ ಭಯ. ಇಂದು ಕೇವಲ 50 ನಿಮಿಷದಲ್ಲಿ ಮೂರು ಬೈಕ್, ಎರಡು ಕಾರು ಹಾಗೂ ಒಂದು ಆಟೋದಲ್ಲಿ ಸೋಂಕಿತರು ಓಡಾಡಿದ್ದು, ಈಟಿವಿ ಭಾರತದ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಚಾಮರಾಜನಗರ ಡಿಸಿ ಡಾ. ಎಂ.ಆರ್.ರವಿ, ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ಕರೆತರಲು ಮತ್ತು ಮನೆಗೆ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗುವುದು ಎಂದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಗ್ರಾಮೀಣ ಭಾಗದ ಸೋಂಕಿತರನ್ನು ಹೋಂ ಐಸೋಲೇಷನ್ಗೆ ಕಳುಹಿಸದೆ ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದರು. ಆದರೆ ಇವೆಲ್ಲವೂ ಕೇವಲ ಮಾತಾಗಿಯೇ ಉಳಿದಿದೆ.