ಚಾಮರಾಜನಗರ: ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ತಾಲೂಕುಗಳ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ 'ಸಂವಿಧಾನ ಓದು' ಪುಸ್ತಕ ವಿತರಣಾ ಸಮಾರಂಭವನ್ನು ಇಂದು ಚಾಮರಾಜನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 12 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಚಾಮರಾಜನಗರ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಉದ್ಘಾಟಿಸಲಿದ್ದು, ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಂಸದ ವಿ. ಶ್ರೀನಿವಾಸ್ ಪ್ರಸಾದ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಂವಿಧಾನ ಓದು ಪುಸ್ತಕದ ಕರ್ತೃ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಭಾಗವಹಿಸಲಿದ್ದಾರೆ.
96 ಪುಟಗಳನ್ನು ಒಳಗೊಂಡ ಸಂವಿಧಾನ ಓದು ಪ್ರತಿ ಪುಸ್ತಕದ ದರ 50 ರೂ ಆಗಿದ್ದು, ಚಾಮರಾಜನಗರ ಜಿಲ್ಲೆಯ 14,800 ಹಾಗೂ ಮೈಸೂರು ಜಿಲ್ಲೆಯ 15 ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುತ್ತದೆ. ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರು, ದೇಶದಲ್ಲಿ ಮೊದಲ ಬಾರಿಗೆ ಸಂಸದರ ನಿಧಿಯಿಂದ ಈ ವಿಶಿಷ್ಟ ಬಗೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.