ಚಾಮರಾಜನಗರ: ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟದಲ್ಲಿ ಮುಳುಗೇಳುವ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಒಂದಾಗಿ ಹನೂರು ಪಟ್ಟಣ ಪಂಚಾಯತ್ನಲ್ಲಿ ಗದ್ದುಗೆ ಏರಿವೆ.
ಹೌದು, ಹನೂರು ಪಟ್ಟಣ ಪಂಚಾಯತ ಅಧ್ಯಕ್ಷ ಚುನಾವಣೆಯಲ್ಲಿ ಎಣ್ಣೆ-ಸೀಗೆಕಾಯಿ ಪಾರ್ಟಿಗಳಾದ ಬಿಜೆಪಿ - ಕಾಂಗ್ರೆಸ್ ಒಂದಾಗಿವೆ. ಬಿಜೆಪಿಯ ಚಂದ್ರಮ್ಮ ಉಪಾಧ್ಯಕ್ಷರಾದರೆ, ಕಾಂಗ್ರೆಸ್ನ ಹರೀಶ್ ಕುಮಾರ್ ಅಧಿಕಾರ ಹಿಡಿದರು.
ಒಟ್ಟು 13 ಸದಸ್ಯ ಬಲದ ಹನೂರು ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಜೆಡಿಎಸ್ 6, ಕಾಂಗ್ರೆಸ್ 4 ಹಾಗೂ ಬಿಜೆಪಿ ಮೂರು ಸ್ಥಾನಗಳಿಸಿದ್ದವು. ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಆದರೆ, ಆರು ಸ್ಥಾನ ಗಳಿಸುವ ಮೂಲಕ ಜೆಡಿಎಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ನಡುವೆ ಬಿಜೆಪಿಯ ಓರ್ವ ಸದಸ್ಯ ಮೃತಪಟ್ಟಿದ್ದರಿಂದ ಒಂದು ಸ್ಥಾನ ಖಾಲಿಯಾಗಿ ಬಿಜೆಪಿ ಎರಡು ಸ್ಥಾನ ಮಾತ್ರ ಹೊಂದಿತ್ತು.
ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸಂಸದ ಹಾಗೂ ಶಾಸಕರ ಮತ ಸೇರಿ ಕೈ-ಕಮಲ ಮೈತ್ರಿ ಜಯ ಸಾಧಿಸಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಜೆಡಿಎಸ್ ಅಧಿಕಾರದಿಂದ ವಂಚಿತವಾಯಿತು.