ಚಾಮರಾಜನಗರ: ಮಲೆ ಮಹದೇಶ್ವರರ ಭಕ್ತಿಗೀತೆ ‘ಸೋಜುಗಾದ ಸೂಜು ಮಲ್ಲಿಗೆ’ ಹಾಡನ್ನು ಕ್ರೌರ್ಯ ಮೆರೆಯುವ ದೃಶ್ಯಕ್ಕೆ ಬಳಕೆ ಮಾಡಿಕೊಂಡಿರುವ ಗರುಡ ಗಮನ ವೃಷಭ ವಾಹನ ಚಿತ್ರತಂಡದ ವಿರುದ್ಧ ಕರುನಾಡ ವಿಜಯಸೇನೆ ಸಂಘಟನೆ ಕೋರ್ಟ್ ಮೆಟ್ಟಿಲೇರಿದೆ.
ಕರುನಾಡ ವಿಜಯಸೇನೆ ಅಧ್ಯಕ್ಷ ಬಿ.ಮೋಹನ್‌ಕುಮಾರ್ ಸೂಚನೆ ಮೇರೆಗೆ ಸಂಘಟನೆ ಬೆಂಗಳೂರು ನಗರ ಅಧ್ಯಕ್ಷ ವಿಜಯಕುಮಾರ್ ಬೆಂಗಳೂರಿನ ಸಿವಿಲ್ ಕೋರ್ಟ್‌ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದ ನಿರ್ದೇಶಕ ರಾಜ್ ಬಿ.ಶೆಟ್ಟಿ, ನಟ ರಿಷಬ್ ಶೆಟ್ಟಿ, ನಿರ್ಮಾಪಕರಾದ ರವಿ ರೈ ಬಿ.ವಿ, ವಚನ ಶೆಟ್ಟಿ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ: ’ಗಗವೃವಾ’ ಚಿತ್ರದಲ್ಲಿನ ಮಾದಪ್ಪನ ಹಾಡನ್ನು ತೆಗೆದುಹಾಕಿ: ಸಾಲೂರು ಶ್ರೀ ಆಗ್ರಹ
ಚಿತ್ರದಲ್ಲಿ ಕೊಲೆ ಮಾಡಿ ವಿಕೃತಿ ಮೆರೆಯುವ ದೃಶ್ಯಕ್ಕೆ ಮಾದಪ್ಪನ ಭಕ್ತಿಗೀತೆಯನ್ನು ಹಿನ್ನೆಲೆ ಸಂಗೀತವನ್ನಾಗಿ ಬಳಸಿದ್ದಾರೆ. ಇದರಿಂದ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆಯಾಗುತ್ತಿದೆ. ಸಿನಿಮಾದಲ್ಲಿ ಈ ಹಾಡನ್ನು ತೆಗೆಯಬೇಕೆಂದು ಅರ್ಜಿದಾರರು ಕೋರಿದ್ದಾರೆ.