ಚಾಮರಾಜನಗರ: ಬುದ್ಧಿ ಬರುವ ಮುನ್ನವೇ ವಿವಾಹ ಬಂಧನಕ್ಕೆ ಒಳಪಡುವ ಅನಿಷ್ಟ ಪದ್ಧತಿ ಗಡಿಜಿಲ್ಲೆಯಲ್ಲಿ ಈ ವರ್ಷ ಮತ್ತಷ್ಟು ಹೆಚ್ಚಾಗಿದ್ದು, ಬಾಲ್ಯವಿವಾಹಕ್ಕೆ ಕೊರೊನಾ ಲಾಕ್ ಡೌನ್ ವರವಾಗಿ ಪರಿಣಮಿಸಿದೆ.
ಈಟಿವಿ ಭಾರತಕ್ಕೆ ಮೂಲಗಳು ಅಂಕಿ-ಅಂಶವನ್ನು ಒದಗಿಸಿದ್ದು, ಅದರಂತೆ ಲಾಕ್ ಡೌನ್ ಅವಧಿಯಾದ ಏಪ್ರಿಲ್- ಆಗಸ್ಟ್ ವರೆಗೆ 9 ಬಾಲ್ಯವಿವಾಹವಾಗಿದ್ದು, 55 ಮದುವೆಗಳನ್ನು ಮಕ್ಕಳ ಸಹಾಯವಾಣಿ, ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿಲ್ಲಿಸಿದ್ದಾರೆ. 5 ಬಾಲ್ಯವಿವಾಹ ಪ್ರಕರಣಗಳಿಗೆ ಸೂಕ್ತ ವಿಳಾಸ ಇಲ್ಲದಿರುವುದು ಮತ್ತು 11 ತಪ್ಪು ಮಾಹಿತಿ ನೀಡಿದ್ದ ಮದುವೆಗಳು 5 ತಿಂಗಳಿನಲ್ಲಿ ನಡೆದಿದೆ.
ಕಳೆದ ವರ್ಷದ ಏಪ್ರಿಲ್- ಆಗಸ್ಟ್ ವರೆಗೆ ಹೋಲಿಸಿದರೆ ಈ ವರ್ಷ 8 ಪ್ರಕರಣ ಹೆಚ್ಚು ದಾಖಲಾಗಿದೆ. ಕಳೆದ ವರ್ಷದ ಏಪ್ರಿಲ್ ನಿಂದ ಮಾರ್ಚ್ ವರೆಗೆ 22 ವಿವಾಹ ನಡೆದಿದ್ದು, 67 ಮದುವೆಗಳನ್ನು ನಿಲ್ಲಿಸಲಾಗಿದೆ ಎಂದು ಅಂಕಿ ಅಂಶಗಳ ಮೂಲಕ ತಿಳಿದು ಬಂದಿದೆ. 2019 ರ ಏಪ್ರಿಲ್ ನಿಂದ 2020 ರ ಆಗಸ್ಟ್ ವರೆಗೆ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ 187 ಪ್ರಕರಣ ನಡೆದಿದ್ದು, ಇವುಗಳಲ್ಲಿ ಅಧಿಕಾರಿಗಳು ತೆರಳುವಷ್ಟರಲ್ಲಿ 31 ಮದುವೆಗಳಾಗಿವೆ.
ಜನಪ್ರತಿನಿಧಿಗಳ ಒತ್ತಡ: ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ವರ, ವರನ ತಂದೆ-ತಾಯಿ, ಅರ್ಚಕ, ಅಡಿಗೆಯವರ ಮೇಲೆ ಪ್ರಕರಣ ದಾಖಲಾಗಲಿದ್ದು, ಈ ವೇಳೆ ಕೆಲ ಶಾಸಕರಾದಿಯಾಗಿ ಜನಪ್ರತಿನಿಧಿಗಳು, ಬೆಂಗಳೂರಿನ ಉನ್ನತ ಅಧಿಕಾರಿಗಳು ಕರೆ ಮಾಡಿ ಪ್ರಕರಣ ಕೈ ಬಿಡುವಂತೆ ಒತ್ತಡ ಹೇರುತ್ತಾರೆ. ಆದರೆ ಅವಕ್ಕೆಲ್ಲಾ ಬಗ್ಗದೆ ಕೇಸ್ ದಾಖಲಿಸಯಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ CWC ಸದಸ್ಯರೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದರು.
ಇನ್ನು ಕೆಲ ಪ್ರಕರಣಗಳಲ್ಲಿ ಮದುವೆಯಾಗಲಿದ್ದ ಬಾಲಕಿಯರೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿವಾಹ ನಿಲ್ಲಿಸುವ ದಿಟ್ಟತನ ತೋರಿದ್ದಾರೆ. ಹಲವರು ಮದುವೆ ಮಾಡುತ್ತಿಲ್ಲ. ನಿಶ್ಚಿತಾರ್ಥ ಮಾಡುತ್ತಿದ್ದೇವೆ ಎಂದು ಸಬೂಬು ಹೇಳಲಿದ್ದು, ಕಾನೂನಿಗೆ ತಿದ್ದುಪಡಿ ಅವಶ್ಯ ಎಂದು ಅವರು ಅಭಿಪ್ರಾಯ ಹಂಚಿಕೊಂಡರು.
ಇನ್ನು ಕೆಲ ಸಮುದಾಯಗಳಲ್ಲಿ ಮಾತ್ರ ಬಾಲ್ಯ ವಿವಾಹ ನಡೆಯಲಿದೆ ಎಂಬುದಕ್ಕೆ ಅಪವಾದದಂತೆ
ಈ ವರ್ಷ ನಿಲ್ಲಿಸಿರುವ 2 ಬಾಲ್ಯ ವಿವಾಹ ಮೇಲ್ವರ್ಗಕ್ಕೆ ಸೇರಿರುವುದು ಅನಿಷ್ಟ ಪದ್ಧತಿ ವಿಸ್ತಾರಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ.