ಚಾಮರಾಜನಗರ: ಇಂಧನ ಬೆಲೆ ಹಾಗೂ ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಇಂದು ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ಹೊರಹಾಕಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕಾಂಗ್ರೆಸ್ ಮುಖಂಡ ಎನ್.ಚೆಲುವರಾಯಸ್ವಾಮಿ, ಶಾಸಕರುಗಳಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಡಳಿತ ಭವನದರೆಗೆ ಸೈಕಲ್ ಜಾಥಾ ನಡೆಸಿದರು.
ಈ ವೇಳೆ ಚೆಲುವರಾಯಸ್ವಾಮಿ ಮಾತನಾಡಿ, 'ಆಕ್ಸಿಜನ್ ದುರಂತ ಏನಾದರೂ ಬೇರೆ ಜಿಲ್ಲೆಯಲ್ಲಿ ಆಗಿದ್ದರೆ ಸರ್ಕಾರವೇ ಉರುಳುತ್ತಿತ್ತು. ಓರ್ವ ಸತ್ತಾಗಲೇ ಸರ್ಕಾರಗಳು ಬಿದ್ದ ಉದಾಹರಣೆ ಇದೆ. 36 ಮಂದಿ ಸತ್ತರೂ ಸರ್ಕಾರ ಸಾಂತ್ವನ ಹೇಳಿಲ್ಲವಲ್ಲ, ನಾವು ಹೋರಾಟ ಮಾಡಿದ ಬಳಿಕ ಕೋವಿಡ್ನಿಂದ ಮೃತಪಟ್ಟವರಿಗೆ ಒಂದು ಲಕ್ಷ ರೂ. ಪರಿಹಾರ ಕೊಡಲು ಸರ್ಕಾರ ಘೋಷಿಸಿತು' ಎಂದರು.
ಒಂದೆಡೆ ಕೊರೊನಾದಿಂದ ಆರ್ಥಿಕ ಸಂಕಷ್ಟ, ಬೀದಿಗೆ ಬಿದ್ದ ಜೀವನದ ನಡುವೆ ಬೆಲೆ ಏರಿಕೆಯು ಶ್ರೀಸಾಮಾನ್ಯನನ್ನು ಹೈರಣಾಗಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಆಡಳಿತ ನಡೆಸಲು ನೈತಿಕತೆಯೇ ಇಲ್ಲ, ದರ ಏರಿಕೆಯ ಬಗ್ಗೆ ಇದುವರೆಗೂ ಪ್ರಧಾನಿ ಮಾತನಾಡಿಲ್ಲ, ಇದು ಅವರಿಗೆ ವಿಚಾರವೇ ಅಲ್ಲದಾಗಿದೆ, ಜನರು ಎಚ್ಚರಗೊಳ್ಳುವ ತನಕ ಈ ಸಮಸ್ಯೆಗಳಿಗೆ ಮುಕ್ತಿ ಇಲ್ಲ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಯುಪಿಎ ಸರ್ಕಾರದ ಅಧಿಕಾರದ ಅವಧಿಗಿಂತ ಈಗಲೇ ಪ್ರತಿ ಬ್ಯಾರೆಲ್ಗೆ ಕಡಿಮೆ ಬೆಲೆ ಇದ್ದರೂ ಹತ್ತಾರು ಪಟ್ಟು ಹೆಚ್ಚು ದುಡ್ಡು ಕೊಟ್ಟು ಇಂಧನ ಖರೀದಿಸಬೇಕಿದೆ ಎಂದು ಕಿಡಿಕಾರಿದರು.
ಕೋವಿಡ್ ರೂಲ್ಸ್ ಮಾಯ:
ನೂರಾರು ಮಂದಿ ಕಾರ್ಯಕರ್ತರು ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಕೋವಿಡ್ ರೂಲ್ಸ್ ಮಾಯವಾಗಿತ್ತು. ಕಾಂಗ್ರೆಸ್ ನಾಯಕರು, ಮುಖಂಡರು ಕೂಡ ಸಾಮಾಜಿಕ ಅಂತರ ಪಾಠ ಮಾಡುವುದನ್ನು ಮರೆತರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿನ ಸಭಾ ಕಾರ್ಯಕ್ರಮದಲ್ಲೂ ಕೊರೊನಾ ರೂಲ್ಸ್ ಇಲ್ಲವಾಗಿತ್ತು. ಕೊರೊನಾ ರೂಲ್ಸ್ ಬ್ರೇಕ್ ಆಗಿದ್ದರೂ ಕೂಡ ಪೊಲೀಸರು ಜಾಣ ಕುರುಡು ಪ್ರದರ್ಶಿಸಿದರು.