ಚಾಮರಾಜನಗರ: ಪುಸ್ತಕದ ಬದನೆಕಾಯಿ, ಕೃತಿಯೇ ಬೇರೆ - ಕಾರ್ಯವೇ ಬೇರೆ ಎಂಬ ಮಾತುಗಳಿಗೆ ಅಪವಾದದಂತೆ ಪುಸ್ತಕಗಳನ್ನು ಓದಿ ಸಮಗ್ರ ಕೃಷಿಯ ಪ್ರೇರೇಪಣೆ ಪಡೆದು ದಿನಕ್ಕೆ ಒಂದೂವರೆ ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ ಈ ಮಹಿಳೆ.
ಹೌದು, ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮದ ಪ್ರಭಾಮಣಿ ಎಂಬವರು ತನ್ನ ತಮ್ಮ ನೀಡಿದ ಸಮಗ್ರ ಕೃಷಿ, ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳಕ್ಕೆ ಸಂಬಂಧಿಸಿದ ಹತ್ತಾರು ಪುಸ್ತಕಗಳನ್ನು ಓದಿ ಪತಿ ಪ್ರಕಾಶ್ ಅವರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸೈ ಎನಿಸುವಷ್ಟರ ಮಟ್ಟಿಗೆ ಆದಾಯದ ಮೂಲ ಕಂಡುಕೊಂಡಿದ್ದಾರೆ.
5 ಎಕರೆ ಜಮೀನಿನ 10 ಗುಂಟೆ ಜಾಗದಲ್ಲಿ 5 ಬಗೆಯ ತರಕಾರಿ, ಸೊಪ್ಪುಗಳನ್ನು ಬೆಳೆಯುತ್ತಿದ್ದು, ವಿವಿಧ ಅವಧಿಯಲ್ಲಿ ಫಸಲು ಕೈ ಸೇರುವುದರಿಂದ ನಿತ್ಯ 1500 ರೂ. ಆದಾಯ ಗಳಿಸುತ್ತಾರೆ. ಇದರೊಟ್ಟಿಗೆ, ವಾಣಿಜ್ಯ ಬೆಳೆಗಳಾದ ಅರಿಶಿಣ, ಬಾಳೆ, ಕೋಸು ಹಾಗೂ ಕಬ್ಬು ಬೆಳೆಯುತ್ತಿದ್ದು, ಸಮಗ್ರ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ.
ಕೂಲಿ ಮಾಡುತ್ತಿದ್ದ ದಂಪತಿ:
ರಾಸಾಯನಿಕ ಗೊಬ್ಬರ, 5 ಎಕರೆಗೆ ಒಂದೇ ಬೆಳೆ ಬೆಳೆದು ಕೈ ಸುಟ್ಟುಕೊಂಡು 5 ವರ್ಷಗಳ ಕಾಲ ಗುತ್ತಿಗೆ ಕೊಟ್ಟು ಪ್ರಕಾಶ್ ದಿನಗೂಲಿಗೆ ಹಾಗೂ ಪ್ರಭಾಮಣಿ ತಿಂಗಳಿಗೆ 6 ಸಾವಿರ ರೂ. ಸಿಗುವ ನೌಕರಿ ಹಿಡಿದಿದ್ದರು. ಗುತ್ತಿಗೆ ಅವಧಿ ಮುಗಿಯುವ ವೇಳೆ ಪ್ರಭಾಮಣಿ ಅವರ ತಮ್ಮ ಕೃಷಿಗೆ ಸಂಬಂಧಿಸಿದ ಪುಸ್ತಕಗಳು, ಯೂಟ್ಯೂಬ್ ಲಿಂಕ್ಗಳನ್ನು ಕಳುಹಿಸುತ್ತಿದ್ದಾಗ ಪ್ರೇರಣೆಗೊಂಡು, ಪತಿಯನ್ನು ಕೃಷಿ ಮಾಡಲು ಒಪ್ಪಿಸಿ ಸಮಗ್ರ ಕೃಷಿ ಆರಂಭಿಸಿದರು. ಆರಂಭದಲ್ಲಿ ಒಂದೂವರೆ ವರ್ಷ ಕಷ್ಟವಾದರೂ ಈಗ ಕೈತುಂಬಾ ದುಡಿಯುತ್ತಿದ್ದಾರೆ.
ಸ್ವಂತ ನರ್ಸರಿ, ಟ್ರ್ಯಾಕ್ಟರ್:
ಪುಸ್ತಕಗಳು, ಯೂಟ್ಯೂಬ್ ವಿಡಿಯೋ, ಕೆವಿಕೆ ವಿಜ್ಞಾನಿಗಳ ಸಹಾಯ ಪಡೆದು ನರ್ಸರಿ ಮಾಡಿಕೊಂಡಿದ್ದಾರೆ. 20 - 25 ಬಗೆಯ ತರಕಾರಿ, ಸೊಪ್ಪಿನ ಬೀಜಗಳನ್ನು ತಯಾರಿಸಿಕೊಳ್ಳಲಿದ್ದು, ರಾಸಾಯನಿಕ ಮುಕ್ತ ತರಕಾರಿ-ಸೊಪ್ಪನ್ನು ಬೆಳೆಯುತ್ತಿದ್ದಾರೆ. ಆದಾಯ ಗಳಿಸುತ್ತಿದ್ದಂತೆ ಮಿನಿ ಟ್ರ್ಯಾಕ್ಟರ್ ಕೂಡ ಕೊಂಡುಕೊಂಡ ಪತಿ ಪ್ರಕಾಶ್, ಸ್ವಂತ ಕೆಲಸ ಮಾಡುವುದರ ಜತೆಗೆ ಟ್ರಾಕ್ಟರ್ ಅನ್ನು ಬಾಡಿಗೆಗೂ ಕೊಡುತ್ತಾರೆ.
ಪ್ರಭಾಮಣಿ ಹಾಗೂ ಪ್ರಕಾಶ್ ಇಬ್ಬರ ತಂದೆ - ತಾಯಂದಿರು, ಮಕ್ಕಳು ಇದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇವರು ಕಾರ್ಮಿಕರನ್ನು ಬಳಸಿಕೊಳ್ಳುವುದು ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ. ಆದ್ದರಿಂದ ಕೂಲಿ ಕಾರ್ಮಿಕರ ಹಣವೂ ಇವರಿಗೆ ಉಳಿತಾಯವಾಗುತ್ತಿದೆ.
ಏನೇನು ಬೆಳೆಯುತ್ತಾರೆ?
ಕ್ಯಾರೆಟ್, ಬೀನ್ಸ್, ಹೀರೇಕಾಯಿ, ಕುಂಬಳಕಾಯಿ, ಸೋರೆಕಾಯಿ, ಬೆಂಡೆಕಾಯಿ, ಈರುಳ್ಳಿ, ಬೀಟ್ ರೂಟ್, ಬದನೆ, ಅಗಸೆ, ನುಗ್ಗೆ ಸೊಪ್ಪು, ಪಾಲಕ್, ದಂಟು, ಮೆಂತ್ಯೆ, ಕಿಲಕಿರೆ, ಪುದಿನಾ, ಕೊತ್ತಂಬರಿ, ಸಬ್ಬಸ್ಸಿಗೆ ಹಾಗೂ ಕರಿಬೇವು ಸೊಪ್ಪನ್ನು ಕೇವಲ 10 ಗುಂಟೆ ಜಾಗದಲ್ಲಿ ಬೆಳೆಯುತ್ತಿದ್ದಾರೆ. ಸೌತೆಕಾಯಿ, ಟೊಮೇಟೊ, ಪರಂಗಿ, ಬಾಳೆ, ಅರಿಶಿಣ, ಕೋಸು, ಕಬ್ಬು ಬೆಳೆಯುತ್ತಿದ್ದು, 5 ಹಸುಗಳನ್ನು ಸಾಕಿಕೊಂಡಿದ್ದಾರೆ.
ಸುವರ್ಣಾವತಿ ಜಲಾಶಯ ಸಮೀಪವೇ ಇರುವುದರಿಂದ ಆನೆ, ಹಂದಿಗಳ ಕಾಟ ನಿರಂತರವಾಗಿದ್ದರೂ ಇದನ್ನೆಲ್ಲ ತಾಳಿಕೊಂಡು ಕೃಷಿ ಭೂಮಿಯನ್ನು ನಂಬಿ ಬದುಕುತ್ತಿದ್ದಾರೆ.