ಚಾಮರಾಜನಗರ: ತಮಿಳುನಾಡಿನ ಕೊಂಗಳ್ಳಿ ಬೆಟ್ಟ, ತಲೆಮಲೈ, ಚಿಕ್ಕಳ್ಳಿ ಭಾಗದಲ್ಲಿ ಜೋರು ಮಳೆ ಪರಿಣಾಮ ಚಾಮರಾಜನಗರದ ಚಿಕ್ಕಹೊಳೆ ಜಲಾಶಯ(Chikkahole dam)ಇಂದು ಕೋಡಿ ಬಿದ್ದಿದ್ದು 70 ಕ್ಯೂಸೆಕ್ ನೀರು ಹೊರಹೋಗುತ್ತಿದೆ.
74 ಅಡಿ ಸಾಮರ್ಥ್ಯದ ಈ ಜಲಾಶಯ 2010 ರ ಬಳಿಕ ಸಂಪೂರ್ಣ ಭರ್ತಿಯಾಗಿರಲಿಲ್ಲ. ಆದರೆ, ದಶಕದ ಮಹಾಮಳೆಗೆ ಅವಳಿ ಜಲಾಶಯಗಳೆಂದೇ ಕರೆಯುವ ಸುವರ್ಣಾವತಿ(Suvarnavathi dam)ಮತ್ತು ಚಿಕ್ಕಹೊಳೆ ಡ್ಯಾಂ (Chikkahole dam) ಮೈದುಂಬಿದ್ದು ಭವಿಷ್ಯದ ನೀರಿನ ಕೊರತೆ ನೀಗಿಸುವ ನಿರೀಕ್ಷೆ ಮೂಡಿಸಿದೆ.
ಈ ಹಿಂದೆ ಚಿಕ್ಕಹೊಳೆ ಜಲಾಶಯ ಭರ್ತಿಯಾದ ಬಳಿಕ ಸುವರ್ಣಾವತಿ ತುಂಬುತ್ತಿತ್ತು. ಆದರೆ, ದಿಂಬಂ, ಬೇಡಗುಳಿ, ಅತ್ತಿಕಾನೆ ಘಟ್ಟ ಪ್ರದೇಶದಲ್ಲಿ ವರುಣನ ಆರ್ಭಟಕ್ಕೆ ಚಿಕ್ಕಹೊಳೆ ಜಲಾಶಯ ತುಂಬುವ ಒಂದು ವಾರ ಮೊದಲೇ ಸುವರ್ಣಾವತಿ ಜಲಾಶಯ ಮೈದುಂಬಿತ್ತು. ತಲೈಮಲೈ, ಕೊಂಗಳ್ಳಿ ಬೆಟ್ಟದ ಜೋರು ಮಳೆಗೆ ಇಂದು ಚಿಕ್ಕಹೊಳೆ ಮೈದುಂಬಿದೆ.
ಸುವರ್ಣಾವತಿ ಜಲಾಶಯದಿಂದ ಮಲ್ಲದೇವನಹಳ್ಳಿ ಕೆರೆ, ಪುತ್ತನಪುರ ಕೆರೆ, ಹೊಮ್ಮಕೆರೆ, ಸರಗೂರುಮೋಳೆ ಕೆರೆ, ಕನ್ನೇಗಾಲ ಕೆರೆ ಭರ್ತಿಯಾಗಿದ್ದು ಬಂಡಿಗೆರೆ, ದೊಡ್ಡಕೆರೆ, ಚಿಕ್ಕ ಕೆರೆಗೆ ನೀರು ಹೋಗುತ್ತಿದ್ದು ಅವು ಸೇರಿದಂತೆ ಒಟ್ಟು 13 ಕೆರೆಗಳು ಭರ್ತಿಯಾಗಲಿವೆ ಎಂದು ನೀರಾವರಿ ಅಧಿಕಾರಿ ಮಹಾದೇವಸ್ವಾಮಿ ತಿಳಿಸಿದ್ದಾರೆ.
ಅವಳಿ ಜಲಾಶಯಗಳು ಭರ್ತಿಯಾಗಿರುವುದರಿಂದ ಭಾನುವಾರದ ಪಿಕ್ನಿಕ್ ಆನಂದಕ್ಕೆ ಪ್ರವಾಸಿಗರು ಅವಳಿ ಡ್ಯಾಂಗಳಿಗೆ ಲಗ್ಗೆ ಹಾಕಿದ್ದರು. ಹಸಿರು, ನೀರಿನ ನಡುವೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುವುದು ಸಾಮಾನ್ಯ ದೃಶ್ಯವಾಗಿತ್ತು.
ತಮಿಳುನಾಡು ರಸ್ತೆಯಲ್ಲೇ ಈ ಎರಡು ಡ್ಯಾಂಗಳು ಇರುವುದರಿಂದ ತಮಿಳುನಾಡಿಗೆ ಹೋಗುವವರು ಅವಳಿ ಜಲಾಶಯಗಳಿಗೆ ಭೇಟಿ ಕೊಟ್ಟು, ಸಂಭ್ರಮಿಸಿ ತೆರಳುತ್ತಿದ್ದರು.