ಚಾಮರಾಜನಗರ: ಬೆಂಕಿ ಬೀಳದಂತೆ ಅರಣ್ಯ ಇಲಾಖೆ ತೀವ್ರ ನಿಗಾ ಇಟ್ಟಿರುವ ವೇಳೆಯಲ್ಲೇ ವರುಣದೇವ ಕೃಪೆ ತೋರಿದ್ದು, ಬಂಡೀಪುರ ಸೇರಿದಂತೆ ಬಿಳಿಗಿರಿರಂಗನಬೆಟ್ಟ, ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಜೋರು ಮಳೆಯಾಗಿದೆ.
ಅಕಾಲಿಕ ಮಳೆ ಹೀಗೆ ಮುಂದುವರೆದರೆ ಕಿಡಿಗೇಡಿಗಳ ಬೆಂಕಿಗೆ ಕಾಡು ಧಗಧಗಿಸುವುದು ತಪ್ಪಲಿದ್ದು, ನೀರಿನ ಸೆಲೆ ಹುಡುಕಿಕೊಂಡು ವನ್ಯಜೀವಿಗಳು ನಾಡಿಗೆ ಧಾವಿಸುವುದು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಎರಡ್ಮೂರು ದಿನ ಜೋರು ಮಳೆಯಾದರೆ ಬೆಂಕಿ ಬೀಳುವ ಸಾಧ್ಯತೆ ತೀರಾ ಕಡಿಮೆಯಾಗಲಿದ್ದು, ಒಂದು ರೀತಿಯಲ್ಲಿ ಅಕಾಲಿಕ ಮಳೆ ಅರಣ್ಯ ಇಲಾಖೆಗೆ ವರವಾಗಿ ಪರಿಣಮಿಸಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ಇನ್ನೂ ಎರಡು ದಿನಗಳ ಕಾಲ ತಕ್ಕಮಟ್ಟಿಗೆ ಮಳೆಯಾಗುತ್ತದೆ ಎಂಬ ಮಾಹಿತಿ ನೀಡಿದ್ದು, ಕಿಡಿಗೇಡಿಗಳು ಬೆಂಕಿಯಿಡುವ ಕೃತ್ಯಕ್ಕೆ ವರುಣದೇವ ತಕ್ಕಮಟ್ಟಿಗೆ ಬ್ರೇಕ್ ಹಾಕುವ ಆಶಾಭಾವನೆ ಗರಿಗೆದರಿದೆ.
ಅರಿಶಿಣ ಬೆಳೆಗಾರರಿಗೆ ಸಂಕಷ್ಟ: ಈ ಆಕಾಲಿಕ ಮಳೆಯಿಂದಾಗಿ ರೈತರ ಜಮೀನು ಉಳುಮೆ ಮಾಡಲು ಅನುಕೂಲದಾಯಕವಾಗಿದೆ. ಮತ್ತೊಂದೆಡೆ ಹನೂರು ಸೇರಿದಂತೆ ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರು ಅರಿಶಿನ ಕಟಾವು ಮಾಡುತ್ತಿದ್ದು, ಈ ಆಕಾಲಿಕ ಮಳೆಯಿಂದ ಬೇಯಿಸಿದ ಅರಿಶಿನವನ್ನು ಬಿಸಿಲಿನಲ್ಲಿ ಒಣಗಳು ಬಿಟ್ಟಿರುವುದರಿಂದ ಅಕಾಲಿಕ ಮಳೆಗೆ ಅರಿಶಿನ ಮಣ್ಣಿನಲ್ಲಿ ಹೂತುಹೂಗುವ ಆತಂಕ ಎದುರಾಗಿದೆ.
ಇನ್ನು ಈ ಕುರಿತು ರೈತಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಪ್ರತಿಕ್ರಿಯಿಸಿ, ಮಾರ್ಚ್ ಅಂತ್ಯದಲ್ಲಿ ಮಳೆ ಬರುವುದು ವಾಡಿಕೆ, ಆಕಾಲಿಕ ಮಳೆ ಹೀಗೆ ಮುಂದುವರೆದರೆ ಒಕ್ಕಣೆ ಮಾಡುವವರಿಗೆ, ಹುಲ್ಲಿನ ಮೆದೆ ಮಾಡುವವರಿಗೆ, ಅರಿಶಿಣ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ. ಶಿವರಾತ್ರಿಯಿಂದ ಯುಗಾದಿವರೆಗೆ ಬಿಸಿಲಿದ್ದರೆ ಮುಂದಿನ ದಿನಗಳಲ್ಲಿ ಮಳೆ ಬರಲಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಳೆ ಕಡಿಮೆ ಎಂಬುದು ರೂಢಿಗತವಾಗಿರುವ ನಂಬಿಕೆಯಾಗಿದ್ದು, ಅಕಾಲಿಕ ಮಳೆ ಮುಂದುವರೆದರೆ ರೈತರಲ್ಲಿ ಮತ್ತಷ್ಟು ಆತಂಕ ಹುಟ್ಟುಹಾಕುತ್ತದೆ ಎಂದರು.