ಚಾಮರಾಜನಗರ: ಮಗಳ ವಯಸ್ಸಿನ ಯುವತಿಯೊಬ್ಬಳನ್ನು ಪ್ರೇಮ ಪಾಶಕ್ಕೆ ಬೀಳಿಸಿ ಮಾರಣಾಂತಿಕ ಹಲ್ಲೆ ಮಾಡಿ, ಅಪಘಾತದ ನಾಟಕವಾಡಿದ್ದ ಕಿರಾತಕನೊಬ್ಬನನ್ನು ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಅಂಬೇಡ್ಕರ್ ಬಡಾವಣೆ ನಿವಾಸಿಯಾದ ಆಟೋ ಚಾಲಕ ಸಿದ್ದರಾಜು (42) ಬಂಧಿತ ಆರೋಪಿ. ಚಾಮರಾಜನಗರ ತಾಲೂಕಿನ ಮಸಣಪುರ ಗ್ರಾಮದ ಯುವತಿಯೊಬ್ಬಳನ್ನು ತನ್ನ ಬಲೆಗೆ ಬೀಳಿಸಿಕೊಂಡು, ಮೂರನೇ ಮದುವೆಯಾಗಿ ಕಳೆದ ಮೇ.26 ರಂದು ಅವಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಕೊನೆಗೆ ಅಪಘಾತದ ನಾಟಕವಾಡಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ:
ಸಿದ್ದರಾಜುವಿಗೆ ಈ ಹಿಂದೆ ಎರಡು ಮದುವೆಯಾಗಿ ಮಕ್ಕಳೂ ಇವೆ. ಈ ನಡುವೆ ಮಸಣಪುರ ಗ್ರಾಮದ ಯುವತಿಯನ್ನು ಬೆಂಗಳೂರಿಗೆ ಕರೆದೊಯ್ದು ಮದುವೆಯಾಗಿ ಎರಡು ವರ್ಷ ಸಂಸಾರ ಮಾಡಿದ್ದಾನೆ. ಬಳಿಕ, ಚಾಮರಾಜನಗರಕ್ಕೆ ಬಂದು ಬಾಡಿಗೆ ಮನೆ ಮಾಡಿ, ಅವಳಿಗೆ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಂತೆ ತಿಳಿಸಿದ್ದಾನೆ. ಆದರೆ ಯುವತಿ ಒಂಟಿಯಾಗಿ ಇರಲು ಒಪ್ಪದೇ, ಜೊತೆಯಲ್ಲೇ ಇರು ಎಂದು ಒತ್ತಡ ಹಾಕಿದ್ದಕ್ಕೆ ಅವಳನ್ನು ಆಟೋದಲ್ಲಿ ಕರೆದೊಯ್ದು ಕಿವಿಯ ಬಳಿ ಹೊಡೆದಿದ್ದಾನೆ. ಬಳಿಕ ಆಟೋದಿಂದ ಬಿದ್ದಿದ್ದಾಳೆ ಎಂದು ನಾಟಕವಾಡಿ ಪೊಲೀಸರಿಗೂ ಮಾಹಿತಿ ನೀಡಿದ್ದಾನೆ.
ಆಕೆ ಮೃತಪಟ್ಟಿದ್ದರಿಂದ ಭಯಗೊಂಡು ಸಿದ್ದರಾಜು ನಾಪತ್ತೆಯಾದಾಗಿದ್ದ. ಅಣ್ಣನ ಈ ಕೆಲಸಕ್ಕೆ ತಂಗಿಯೂ ಸಹ ಸಾಥ್ ನೀಡಿದ್ದಳು. ಇದೀಗ ಪೊಲೀಸರು ಸಿದ್ದರಾಜು ಹಾಗೂ ಅವನ ತಂಗಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.