ಚಾಮರಾಜನಗರ: ನಗರಸಭೆ ವತಿಯಿಂದ ನಗರದ ಸಿಡಿಎಸ್ ಭವನದಲ್ಲಿ ತೆರೆದಿರುವ ನಿರಾಶ್ರಿತರ ತಾತ್ಕಾಲಿಕ ಕೇಂದ್ರದಲ್ಲಿ ಇಬ್ಬರು ಮಾನಸಿಕ ಅಸ್ವಸ್ಥರು ಸೇರಿದಂತೆ ಐವರು ನಿರಾಶ್ರಿತರಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆಗಳನ್ನು ಕೊಟ್ಟಿದ್ದು, ಕೊವಿಡ್-19 ಭೀತಿ ಕಡಿಮೆಯಾಗುವರೆಗೂ ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುತ್ತಿದೆ.
ಲಾಕ್ ಡೌನ್ ಆಗಿರುವುದರಿಂದ ಊಟಕ್ಕೆ ಪರದಾಡುತ್ತಿದ್ದ ಇವರಿಗೆ ಆಹಾರ-ವಸತಿ ಸೌಕರ್ಯ ಕಲ್ಪಿಸಲಾಗಿದೆ. ಜೊತೆಗೆ, 14 ಮಂದಿ ರಾಜಸ್ಥಾನದ ಪಾನಿಪೂರಿ ವ್ಯಾಪಾರಿಗಳಿಗೂ ಊಟದ ವ್ಯವಸ್ಥೆಯನ್ನು ಮಾಡಿದ್ದು ಕೊರೊನಾ ಆತಂಕ ಮುಗಿಯುವವರೆಗೂ ಅವರ ಯೋಗಕ್ಷೇಮ ನೋಡಿಕೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ರಾಜಣ್ಣ ತಿಳಿಸಿದರು.
ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಸುರೇಶ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಜಿಲ್ಲಾದ್ಯಂತ 58 ಮಂದಿ ನಿರ್ಗತಿಕರನ್ನು ನಮ್ಮ ಟಾಸ್ಕ್ ಫೋರ್ಸ್ ಗುರುತಿಸಿದೆ. ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಚಾಮರಾಜನಗರದಲ್ಲಿ ಪುನರ್ವಸತಿ ಕೇಂದ್ರ ನಿರ್ಮಿಸಿದ್ದು ಎಲ್ಲರನ್ನೂ ಕೇಂದ್ರಕ್ಕೆ ಕರೆತರುವ ಪ್ರಯತ್ನ ಮಾಡಲಾಗುವುದು ಎಂದರು.