ಚಾಮರಾಜನಗರ: ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಒಂದೆಡೆಯಾದರೆ, ಸಿಎಂ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಭೀತಿ ಹೊತ್ತಿದ್ದ ಜಿಲ್ಲೆಯು ಇದೀಗ ಕೋವಿಡ್-19 ತಡೆಯುವಲ್ಲಿ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ.
![Chamrajnagar](https://etvbharatimages.akamaized.net/etvbharat/prod-images/7312586_689_7312586_1590211386821.png)
ಜನರ ಮುನ್ನೆಚ್ಚರಿಕೆ, ಅಧಿಕಾರಿಗಳ ಕಟ್ಟಾಜ್ಞೆ ಜೊತೆಗೆ ಈ ಗಡಿ ಜಿಲ್ಲೆಗೆ ಬರುತ್ತಿರುವ ಕೊರೊನಾ ಆತಂಕ ನೀರು ಕುಡಿದಷ್ಟೇ ಸಲೀಸಾಗಿ ನಿವಾರಣೆಯಾಗುತ್ತಿದೆ. ಪ್ರಾರಂಭದಲ್ಲಿ ಗಡಿ ಜಿಲ್ಲೆಗೆ ಕೇರಳದಿಂದ ಕೊರೊನಾ ಭೀತಿ ಎದುರಾಗಿತ್ತು. ಇದು ನಿವಾರಣೆಯಾದ ಬಳಿಕ ವಿದೇಶಗಳಿಂದ ಬಂದ ಜಿಲ್ಲೆಯ ಜನರು, ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯಲ್ಲಿ ಚಾಮರಾಜನಗರ ಜಿಲ್ಲೆಯವರು ಕೆಲಸ ಮಾಡುತ್ತಿದ್ದರಿಂದ ಕೊರೊನಾತಂಕ ಮತ್ತೆ ಆವರಿಸಿತ್ತು.
ಬಳಿಕ ಬೆಂಗಳೂರಿನ ಪೊಲೀಸ್ ಹನೂರಿನ ಬೆಳ್ತೂರಿಗೆ ಬಂದು ಕೊರೊನಾ ಹಬ್ಬಿಸಿದ ಶಂಕೆ ಬಲವಾಗಿ ಜನರು ಕಳವಳಗೊಂಡ ಬೆನ್ನಲ್ಲೇ ತಮಿಳುನಾಡು, ಬೆಂಗಳೂರಿನ ವಲಸಿಗರು ಆತಂಕ ತಂದಿಟ್ಟಿದ್ದರು. ಗುರುವಾರವಷ್ಟೇ ಮಳವಳ್ಳಿಯ ಅಧಿಕಾರಿಯೋರ್ವ ನಂಜನಗೂಡಿನ ಹೆಳವರಹುಂಡಿಯಲ್ಲಿ ನಡೆದ ವಿವಾಹ ಮಹೋತ್ಸವಕ್ಕೆ ಬಂದು ನಗರಕ್ಕೆ ಕೊರೊನಾ ತಂದಿಟ್ಟ ಆತಂಕ ಮಂಜಿನಂತೆ ಕರಗಿದ್ದು, ಜನರನ್ನು ನಿರಾಳರನ್ನಾಗಿಸಿದೆ.
ಇನ್ನು ಸುತ್ತಲೂ ರೆಡ್ ಝೋನ್ಗಳು ಸಾಲದ್ದಕ್ಕೆ ಎರಡು ರಾಜ್ಯಗಳ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಪತ್ತೆಯಾಗದಿರುವುದು ಅಚ್ಚರಿ ಜೊತೆಗೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ, ಆರೋಗ್ಯ, ಪೊಲೀಸ್ ಇಲಾಖೆಯ ಶ್ರಮ ರಾಜ್ಯಕ್ಕೆ ಮಾದರಿಯಾಗಿದೆ.