ಚಾಮರಾಜನಗರ: ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ನಡೆಯುತ್ತಿದ್ದ ಜಟ್ಟಿ ಕಾಳಗಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ಚಾಮರಾಜನಗರದ ಜಟ್ಟಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ನಾಡಿಗೆ-ಯದುವಂಶಕ್ಕೆ ಶುಭ ಹಾರೈಸಿದರು.
ನಗರದ ದೊಡ್ಡಗರಡಿಯಲ್ಲಿ ಮುಷ್ಟಿ ಕಾಳಗದ ಗುರು ನಾರಯಣ ಜಟ್ಟಿ ನೇತೃತ್ವದಲ್ಲಿ ಜಟ್ಟಿಗಳು ಮಟ್ಟಿ ಪೂಜೆ ಸಲ್ಲಿಸಿ, ತಾಲೀಮು ನಡೆಸುವ ಪರಿಕರಗಳಿಗೆ ನಮಿಸಿ ಯದುವಂಶಕ್ಕೆ, ನಾಡಿಗೆ ಒಳಿತಾಗಲಿ ಕೊರೊನಾ ಮಹಾಮಾರಿ ಶೀಘ್ರ ತೊಲಗಲೆಂದು ನಿಂಬುಜಾದೇವಿಗೆ ಪ್ರಾರ್ಥಿಸಿದರು.
ಶತಶತಮಾನಗಳಿಂದ ರೂಢಿಸಿಕೊಂಡು ಬಂದ ಕಲೆಯನ್ನು ಉಳಿಸಿಕೊಂಡು ವಿಜಯದಶಮಿ ದಿನ ಚಾಮರಾಜನಗರ, ರಾಮನಗರ, ಚನ್ನಪಟ್ಟಣ ಹಾಗೂ ಬೆಂಗಳೂರಿನಿಂದ ತಲಾ ಓರ್ವ ಜಟ್ಟಿ ಎರಡು ಜೋಡಿಗಳಾಗಿ ಕಾಳಗ ನಡೆಸಿ ರಕ್ತ ಚಿಮ್ಮಿಸಲಿದ್ದಾರೆ. ಈ ಬಾರಿ ಚಾಮರಾಜನಗರದಿಂದ ರಮೇಶ್ ಜಟ್ಟಿ ಕಾಳಗ ನಡೆಸಲು ಸಕಲ ತಾಲೀಮು ನಡೆಸಿದ್ದರು. ಆದರೆ, ಕೊರೊನಾ ಕಾರಣಕ್ಕೆ ಈ ಬಾರಿ ಸಮರಕಲೆ ನಡೆಯುತ್ತಿಲ್ಲ.
ಹೇಗಿರಲಿದೆ ಕಾಳಗ: ತಲೆಬೋಳಿಸಿ ದೃಢಕಾಯವಾಗಿರುವ ಜೆಟ್ಟಿ ತನ್ನ ಬಲಗೈಗೆ ವಜ್ರನಖವನ್ನು ಹಿಡಿದು ಎಡಗೈಗೆ ಬಟ್ಟೆ ಕಟ್ಟಿಕೊಂಡಿರುತ್ತಾನೆ. ಇಂತಹ ನಾಲ್ವರು ಅಖಾಡದಲ್ಲಿ ಸೆಣಸಾಡುತ್ತಾರೆ. ತನ್ನ ಬಳಿಯಿರುವ ವಜ್ರನಖದಿಂದ ಎದುರಾಳಿಯ ಮೇಲೆ ಹೋರಾಡಬೇಕು. ಹೊಡೆತವನ್ನು ಕೂಡ ಆತನ ತಲೆ ಮೇಲೆಯೇ ಹೊಡೆಯಬೇಕು. ಹೀಗೆ ಹೊಡೆದ ಏಟು ತಲೆಗೆ ತಾಗಿ ರಕ್ತ ಚಿಮ್ಮಿದರೆ ಆತ ಸೋತ ಎಂದರ್ಥ. ಆದರೆ, ಇಬ್ಬರೂ ದೃಢಕಾಯರಾಗಿರುವುದರಿಂದ ಪ್ರತಿ ಪ್ರಹಾರವನ್ನು ತಪ್ಪಿಸಿಕೊಂಡು ಕಾಳಗ ನಡೆಸುತ್ತಾರೆ. ಇದು ನೋಡಲು ರೋಚಕವಾಗಿರುತ್ತದೆ. ಜಟ್ಟಿಗಳ ತಲೆ ಮೇಲೆ ರಕ್ತ ಹೊರ ಬರುವವರೆಗೂ ಕಾಳಗ ನಡೆಯುತ್ತದೆ. ರಕ್ತ ಬಂದ ಬಳಿಕ ಕಾಳಗ ಕೊನೆಗೊಳ್ಳುತ್ತದೆ.