ಚಾಮರಾಜನಗರ: ಆಧುನಿಕ ಶ್ರವಣಕುಮಾರ ಎಂದೇ ಖ್ಯಾತರಾದ ಮೈಸೂರಿನ ಕೃಷ್ಣಕುಮಾರ್ ಕಳೆದ 3 ದಿನಗಳಿಂದ ಜಿಲ್ಲೆಯ ವಿವಿಧ ದೇಗುಲಗಳಿಗೆ ತಾಯಿಯೊಂದಿಗೆ ತೆರಳಿ ದರ್ಶನ ಪಡೆಯುತ್ತಿದ್ದಾರೆ.
ಮಾತೃ ಸಂಕಲ್ಪ ಯಾತ್ರೆಯನ್ನು ಮೆಚ್ಚಿ ಆನಂದ್ ಮಹಿಂದ್ರಾ ಕೊಡುಗೆಯಾಗಿ ನೀಡಿದ್ದ ಕಾರಿನಲ್ಲಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು ಮನೆದೇವರಾದ ಗುಂಡ್ಲುಪೇಟೆ ತಾಲೂಕಿನ ಹುಲಗನಮುರಡಿ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿಯಿತ್ತು, ಕಾರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತನಗೆ ಕೊಡುಗೆಯಾಗಿ ಸಿಕ್ಕಿದ ಕಾರಿನಲ್ಲಿ ಮೊದಲ ಬಾರಿಗೆ ಮನೆದೇವರ ದರ್ಶನಕ್ಕೆ ಬಂದಿದ್ದಾರೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ, ವಿಜಯ ನಾರಾಯಣ ಸ್ವಾಮಿ ದೇಗುಲ, ಪರವಾಸು ಮಂದಿರ, ರಾಘವೇಂದ್ರ ಸ್ವಾಮಿ ಮಠಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಇದಾದ ಬಳಿಕ, ಚಾಮರಾಜನಗರದ ಚಾಮರಾಜೇಶ್ವರ ದೇಗುಲ, ಕಾಡು ನಾರಾಯಣ ಸ್ವಾಮಿ, ವೀರಭದ್ರಸ್ವಾಮಿ, ಹರಳುಕೋಟೆ ಆಂಜನೇಯ ದೇಗುಲ ಹಾಗೂ ಜನಾರ್ಧನ ದೇಗುಲ, ಮಾರಮ್ಮನ ದೇವಾಸ್ಥಾನ, ಶ್ರೀಕಂಠೇಶ್ವರ ದೇವಾಲಯಗಳಿಗೆ ಭೇಟಿಯಿತ್ತು ಮಾತೃ ಸಂಕಲ್ಪ ಯಾತ್ರೆಯನ್ನು ಮುಂದುವರೆಸಿದ್ದಾರೆ.
ಮಾತೃ ಸೇವಾರತ್ನ ಬಿರುದು: ತಾಯಿ ಆಸೆಯನ್ನು ಈಡೇರಿಸಲು ಬರೋಬ್ಬರಿ 55 ಸಾವಿರ ಕಿಮೀ ಬಜಾಜ್ ಚೇತಕ್ನಲ್ಲಿ ಕ್ರಮಿಸಿರುವ ಕೃಷ್ಣಕುಮಾರ್ ಅವರಿಗೆ ನಗರದ ಜೈಹಿಂದ್ ಪ್ರತಿಷ್ಟಾನವು ಶಾಸಕ ಪುಟ್ಟರಂಗಶೆಟ್ಟಿ ಮೂಲಕ ಮಾತೃಸೇವಾ ರತ್ನ ಬಿರುದು ಪ್ರದಾನ ಮಾಡಲಾಯಿತು.
ಈ ವೇಳೆ ಕೃಷ್ಣಕುಮಾರ್ ತಾಯಿ ಚೂಡಾರತ್ನ ಮಾತನಾಡಿ, ಪೂರ್ವ ಜನ್ಮದ ಪುಣ್ಯ ಎಂಬಂತೆ ಕೃಷ್ಣಕುಮಾರ್ ಮಗನಾಗಿ ದೊರಕಿರುವುದು ಸಂತಸವಾಗಿದೆ. 67 ವರ್ಷಗಳಿಂದಲೂ ಪ್ರಪಂಚದ ಜ್ಞಾನವಿರದ ನನಗೆ ಇಡೀ ದೇಶ ಪರ್ಯಟನೆ ಮೂಲಕ ಐತಿಹಾಸಿಕ, ಪುರಾಣ ಪ್ರಸಿದ್ಧ ಸ್ಥಳಗಳನ್ನು ತೋರಿಸುವ ಮೂಲಕ ಕನಸನ್ನು ಈಡೇರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.