ಚಾಮರಾಜನಗರ: ಜನತಂತ್ರದ ಹಬ್ಬಕ್ಕೆ ಚಾಮರಾಜನಗರ ಲೋಕಸಭಾ ಕ್ಷೇತ್ರ ಸಂಪೂರ್ಣ ಸಜ್ಜಾಗಿದೆ. ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕ್ಷೇತ್ರದ ಸಂಪೂರ್ಣ ಚಿತ್ರಣ ಇಲ್ಲಿದೆ...
ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, 2005 ಮತಗಟ್ಟೆಗಳಿವೆ. ಪಟ್ಟಣ ವ್ಯಾಪ್ತಿಯಲ್ಲಿ 261 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,744 ಮತಗಟ್ಟೆಗಳಿವೆ. ಇವುಗಳಲ್ಲಿ 363 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಚುನಾವಣಾ ಕರ್ತವ್ಯಕ್ಕೆ ಒಟ್ಟು 8,420 ಸಿಬ್ಬಂದಿ ನಿಯೋಜಿಸಲಾಗಿದ್ದು, ಭದ್ರತೆಗೆ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಎಸ್ಪಿ ನೇತೃತ್ವದಲ್ಲಿ 1,518 ಪೊಲೀಸರು, 12 ಡಿಎಆರ್, 4 ಕೆಎಸ್ಆರ್ಪಿ, 2 ಬಿಎಸ್ಎಫ್ ತುಕಡಿಗಳನ್ನು ಬಳಸಿಕೊಳ್ಳಲಾಗಿದೆ.
ಈ ಕ್ಷೇತ್ರದಲ್ಲಿ ಒಟ್ಟು 16,86,023 ಮತದಾರರಿದ್ದಾರೆ. ಇವರಲ್ಲಿ 8,42,742 ಮಂದಿ ಪುರುಷರು ಹಾಗೂ 8,43,167 ಮಂದಿ ಮಹಿಳೆಯರು ಮತ್ತು ಇತರರು 114 ಮಂದಿ ಇದ್ದಾರೆ. ಉಮೇದುವಾರಿಕೆ ಕ್ರಮಬದ್ಧವಾಗಿದ್ದು, 12 ಮಂದಿ ಅಭ್ಯರ್ಥಿಗಳಲ್ಲಿ ಇಬ್ಬರು ನಾಮಪತ್ರ ವಾಪಸ್ ಪಡೆದಿದ್ದರು. ಅಂತಿಮವಾಗಿ ಅಖಾಡದಲ್ಲಿ 10 ಮಂದಿ ಕಣದಲ್ಲಿದ್ದಾರೆ.
ಕಾಂಗ್ರೆಸ್ನಿಂದ ಆರ್. ಧ್ರುವನಾರಾಯಣ, ಬಿಜೆಪಿಯಿಂದ ವಿ. ಶ್ರೀನಿವಾಸಪ್ರಸಾದ್, ಬಿಎಸ್ಪಿಯಿಂದ ಡಾ. ಶಿವಕುಮಾರ್, ಯುಪಿಪಿಯಿಂದ ಹನೂರು ನಾಗರಾಜು, ಕರ್ನಾಟಕ ಪ್ರಜಾ ಪಾರ್ಟಿಯಿಂದ ಪ್ರಸನ್ನಕುಮಾರ್ ಬಿ., ಇಂಡಿಯನ್ ನ್ಯೂ ಕಾಂಗ್ರೆಸ್ನಿಂದ ಸುಬ್ಬಯ್ಯ ಮತ್ತು ಪಕ್ಷೇತರರಾದ ಆನಂದ ಜೀವನ್ ರಾಂ, ಎನ್. ಅಂಬರೀಷ್, ಎಂ. ಪ್ರದೀಪ್ಕುಮಾರ್, ಜಿ.ಡಿ. ರಾಜಗೋಪಾಲ್ ಕಣದಲ್ಲಿರುವ ಹುರಿಯಾಳುಗಳು. ಇಂದು 10 ಮಂದಿಯ ಭವಿಷ್ಯ ಮತಯಂತ್ರ ಸೇರಲಿದೆ.
ಇನ್ನು 10 ಪಿಂಕ್ ಮತಗಟ್ಟೆ, 4 ಎಥ್ನಿಕ್ ಬೂತ್ಗಳು ಚಾಮರಾಜನಗರ ಕ್ಷೇತ್ರದಲ್ಲಿವೆ. ಚಾಮರಾಜನಗರ, ಕೊಳ್ಳೇಗಾಲದಲ್ಲಿ ತಲಾ 3 ಹಾಗೂ ಗುಂಡ್ಲುಪೇಟೆ, ಹನೂರಿನಲ್ಲಿ ತಲಾ 2 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಖಿ ಮತಗಟ್ಟೆಗಳಲ್ಲಿ ವೋಟಿಂಗ್ ಮಾಡುವ ಮತದಾರರಿಗೆ ಗಿಡಗಳನ್ನು ವಿತರಿಸುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಳಿದಂತೆ, ಗಿರಿಜನರನ್ನು ಮತಗಟ್ಟೆಗೆ ಸೆಳೆಯಲು 4 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಜನಪ್ರತಿನಿಧಿಗಳ ಮತದಾನ ವಿವರ:
ಸಂಸದ ಆರ್. ಧ್ರುವನಾರಾಯಣ ಗುಂಡ್ಲುಪೇಟೆ ತಾಲೂಕಿನ ಹೆಗ್ಗವಾಡಿಯಲ್ಲಿ, ಸಚಿವ ಪುಟ್ಟರಂಗಶೆಟ್ಟಿ ಯಳಂದೂರು ತಾಲೂಕಿನ ಉಪ್ಪಿನ ಮೋಳೆ, ಶಾಸಕರಾದ ನಿರಂಜನ್ ಕುಮಾರ್ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ, ಎನ್.ಮಹೇಶ್ ಕೊಳ್ಳೇಗಾಲದ ಶಂಕನಪುರ, ಆರ್.ನ ರೇಂದ್ರ ಹನೂರಿನ ದೊಡ್ಡಿಂದುವಾಡಿಯಲ್ಲಿ ಮತ ಚಲಾಯಿಸಲಿದ್ದಾರೆ.