ಚಾಮರಾಜನಗರ: 60 ದಾಟಿತೆಂದರೆ ಸಾಕು ಸುಖ ಜೀವನ ಅರಸುವವರ ನಡುವೆ ಕಳೆದ 12 ವರ್ಷಗಳಿಂದ ಕನ್ನಡ ಕಹಳೆ ಮೊಳಗಿಸುತ್ತಿರುವ ಇವರು ಬೈಕ್, ಸೈಕಲ್ ಮೂಲಕ ಸಾವಿರಾರೂ ಕಿಲೋ ಮೀಟರ್ ಕ್ರಮಿಸಿ ಜಯಭೇರಿ ಬಾರಿಸಿದ್ದಾರೆ.
60 ಆಯ್ತು ಎಂದು ಶಕ್ತಿಯಿದ್ದರೂ ಸುಮ್ಮನೇ ಕೂರುವವರು ಕೆಲವರಾದರೇ ಗುಡಿ-ಗುಂಡಾರ ಸುತ್ತುವುದರಲ್ಲೇ ನಿವೃತ್ತಿ ಜೀವನ ಕಳೆಯುವವರು ಹಲವರು. ಆದರೆ, ನಗರದ ಕೆ.ವಿ.ಮಂಜುನಾಥ್. ವೃತ್ತಿಯಲ್ಲಿ ಗುತ್ತಿಗೆದಾರರಾದರೂ ನೆಲ-ಜಲ-ಭಾಷೆಯ ಬಗ್ಗೆ ಇಂದಿಗೂ ಉತ್ಸಾಹಿ ತರುಣರಾಗಿ ಸಾವಿರಾರು ಕಿಲೋ ಮೀಟರ್ ಕ್ರಮಿಸಿ ಕನ್ನಡ ಕೂಗಿಗೆ ಧ್ವನಿಯಾಗಿದ್ದಾರೆ.
ಕಳೆದ 12 ವರ್ಷದಿಂದ ಪ್ರವಾಸ
ಕನ್ನಡ ಮರೆಯಾಗುತ್ತಿದೆ, ಕನ್ನಡದ ಬಗ್ಗೆ ಯುವ ಜನತೆಯಲ್ಲಿ ಅಭಿಮಾನ ಕ್ಷೀಣಿಸುತ್ತಿದೆ ಎಂದು ಅರಿತು ಕಳೆದ 12 ವರ್ಷದಿಂದ ಕನ್ನಡ, ಕರ್ನಾಟಕದ ನೆಲ, ಜಲ, ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ಉದ್ದೇಶದಿಂದ ಪ್ರತಿವರ್ಷ ರಾಜ್ಯದ ಒಂದು ಭಾಗಕ್ಕೆ ಚಾಮರಾಜನಗರದಿಂದ ಬೈಕ್ ಇಲ್ಲವೇ ಸೈಕಲ್ ಜಾಥಾ ಮಾಡುತ್ತಾರೆ.
ಕನ್ನಡ ಶಾಲೆಗಳನ್ನು ಮುಚ್ಚದಂತೆ, ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹಾರ, ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ, ನೆರೆ ಸಂತ್ರಸ್ಥರಿಗೆ ಮೂಲ ಸೌಕರ್ಯ ಒದಗಿಸಬೇಕೆಂಬುದು ಒತ್ತಾಯಿಸಿ ಈ ವರ್ಷ ಆಂಧ್ರಪ್ರದೇಶದ ಗಡಿಯಾದ ಮುಳಬಾಗಿಲಿಗೆ ಬೈಕ್ ಜಾಥಾ ಆರಂಭಿಸಿದ್ದಾರೆ.
ಗಡಿ ಭಾಗಗಳಿಗೆ ಭೇಟಿ
ಹಿಂದಿನ ವರ್ಷಗಳಲ್ಲಿ ಚಾಮರಾಜನಗರದಿಂದ ಕಾಸರಗೋಡು, ಮೈಸೂರಿನವರೆಗೆ ಸೈಕಲ್ ಜಾಥಾ, ಚಾಮರಾಜನಗರದಿಂದ ಬೆಳಗಾವಿವರೆಗೆ ಬೈಕ್ ಸವಾರಿ ಸೇರಿ ಅನೇಕ ಗಡಿ ಪ್ರದೇಶಗಳಿಗೆ ಸಂಚರಿಸಿ ಕನ್ನಡದ ಬಗ್ಗೆ ಅರಿವು ಮೂಡಿಸಿದ್ದಾರೆ. ಇದೀಗ ಮುಳಬಾಗಿಲು ತನಕ ಜಾಥಾ ಹಮ್ಮಿಕೊಂಡಿದ್ದು, ಅಂದಾಜು 6 ದಿನಗಳ ಕಾಲ ಭಾಷಾಭಿಮಾನ ಮೂಡಿಸಲಿದ್ದಾರೆ.
ಮಂಜುನಾಥ್ ಕನ್ನಡ ಜಾಗೃತಿ ಜಾಥಾ ನಡೆಸುತ್ತಿದ್ದು, ಇಳಿವಯಸ್ಸಿನಲ್ಲೂ ಕನ್ನಡ, ನೆಲ, ಜಲ ಉಳಿವಿಗಾಗಿ ಏಕಾಂಗಿಯಾಗಿ ಸಂಚಾರ ನಡೆಸುತ್ತಿರುವುದು ಯುವಕರಿಗೆ ಪ್ರೋತ್ಸಾಹದಾಯಕವಾಗಿದೆ ಎನ್ನುತ್ತಾರೆ ಯುವ ಸಾಹಿತಿ ಶ್ರೀಧರ್.
ವರ್ಷಪೂರ್ತಿ ಪ್ರವಾಸ: ಈ ನವೆಂಬರ್ನಿಂದ ಮುಂದಿನ ನವೆಂಬರ್ವರೆಗೆ ತಮ್ಮ ಬೈಕ್ ಇಲ್ಲವೇ ಸೈಕಲ್ ಮೂಲಕ ನಾಡಿನ ಪ್ರತಿ ಮೂಲೆ ಮೂಲೆಗೆ ತೆರಳಿ ಕರಪತ್ರಗಳನ್ನು ವಿತರಿಸಿ, ಕನ್ನಡದ ಬಗ್ಗೆ ಭಾಷಣಗಳನ್ನು ಮಾಡಲು ನಿರ್ಧರಿಸಿದ್ದಾರೆ. ಏಕಾಂಗಿ ಸಂಚಾರಿಯಾಗಿ ನಾಡಿನಾದ್ಯಂತ ಕನ್ನಡ ಕಟ್ಟಲು ಬೈಕ್ ಸವಾರಿ ನಡೆಸುತ್ತಿರುವ ಮಂಜುನಾಥ್ ನಂ.1 ಕನ್ನಡಿಗನಾಗಿದ್ದು, ಆಂಗ್ಲ, ಹಿಂದಿ ವ್ಯಾಮೋಹಿಗಳಾಗುತ್ತಿರುವ ಯುವ ಜನತೆಗೆ ಮಾದರಿಯಾಗಿದ್ದಾರೆ.