ಚಾಮರಾಜನಗರ : ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ತನ್ನದೇ ಆದ ಪ್ರತಿಷ್ಠೆ ಉಳಿಸಿಕೊಂಡಿರುವ ಜವಾಹರ್ ನವೋದಯ ವಿದ್ಯಾಲಯಕ್ಕೆ ತಮ್ಮ ಮಕ್ಕಳನ್ನು ಕಳಿಸಬೇಕೆನ್ನುವುದು ಎಲ್ಲಾ ಪಾಲಕರ ಆಸೆ. ಆದರೆ, ತರಬೇತಿ ಕೇಂದ್ರಗಳಿಗೆ ಸೇರಿಸಲು ಸಾಧ್ಯವಾಗದ ಮಧ್ಯಮ ವರ್ಗದವರ ಪರದಾಟ ಕಂಡು ಸರ್ಕಾರಿ ನೌಕರರು ಉಚಿತ ಅಧ್ಯಯನ ಕೇಂದ್ರ ಸ್ಥಾಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಚಾಮರಾಜನಗರದಲ್ಲಿನ 50ಕ್ಕೂ ಹೆಚ್ಚು ಸರ್ಕಾರಿ ನೌಕರರು ಗುಂಪುಗೂಡಿ ಮನೆಯೊಂದನ್ನು ಬಾಡಿಗೆ ಪಡೆದು ನವೋದಯ ಪರೀಕ್ಷೆ ಎದುರಿಸುವ 120ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ತರಬೇತಿ ಕೊಡುತ್ತಿದ್ದು, ಗಂಟೆ ಹೊಡಿ-ಸಂಬಳ ಪಡಿ ಎನ್ನುವ ಸರ್ಕಾರಿ ನೌಕರರಿಗೆ ಅಪವಾದವಾಗಿದ್ದಾರೆ.
50ಕ್ಕೂ ಹೆಚ್ಚು ಸರ್ಕಾರಿ ನೌಕರರು ಇವರಲ್ಲಿ ಬಹುಪಾಲು ಶಿಕ್ಷಕರಿದ್ದು, ಪ್ರತಿಯೊಬ್ಬರು ಚಂದಾ ಹಾಕಿ ನಗರದ ನ್ಯಾಯಾಲಯ ರಸ್ತೆಯಲ್ಲಿ "ಪರಿವರ್ತನ ಅಧ್ಯಯನ ಕೇಂದ್ರ" ಎಂಬುದನ್ನು ಆರಂಭಿಸಿದ್ದಾರೆ. ಪ್ರತಿಷ್ಠಿತ ಕಾನ್ವೆಂಟಿಗೆ ತೆರಳುವ ಮಕ್ಕಳು ಒಳಗೊಂಡಂತೆ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಿತ್ಯ ಸಂಜೆ ಎರಡು ತಾಸು ನವೋದಯ ಪರೀಕ್ಷೆಗೆ ತರಬೇತಿ ಕೊಡುತ್ತಿದ್ದಾರೆ.
ಟ್ಯೂಷನ್ ಹಾವಳಿಗೆ ಬ್ರೇಕ್ : ಸರಿ ಸುಮಾರು ಓರ್ವ ವಿದ್ಯಾರ್ಥಿ ನವೋದಯ ಪರೀಕ್ಷೆ ತರಬೇತಿ ಪಡೆಯಬೇಕೆಂದರೆ 5-8 ಸಾವಿರ ರೂ.ವರೆಗೂ ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ಇದೆ. ಸ್ಥಿತಿವಂತರೇನೋ ಹಣ ಕಟ್ಟಿ ಸೇರಿಸುತ್ತಾರೆ. ಆದರೆ, ಮಧ್ಯಮ ವರ್ಗದವರು ಸಾಲ ಮಾಡಬೇಕಾದ ಪರಿಸ್ಥಿತಿ.
ಕೆಲವರಿಗೆ ಅದು ಸಾಧ್ಯವಾಗದೇ ಮಕ್ಕಳನ್ನು ನವೋದಯಗೆ ಸೇರಿಸುವುದು ಕನಸಾಗೇ ಉಳಿಯಲಿದೆ ಎಂಬುದನ್ನು ಮನಗಂಡ ಸರ್ಕಾರಿ ಶಾಲಾ ಶಿಕ್ಷಕರು ಚರ್ಚಿಸಿ ಉಚಿತ ಅಧ್ಯಯನ ಕೇಂದ್ರ ಆರಂಭಿಸಿದ್ದಾರೆ.
ಚಂದಾ ಎತ್ತಿ 50 ಸಾವಿರ ರೂ. ಹಣವನ್ನು ಮನೆಗೆ ಮುಂಗಡವಾಗಿ ಕೊಟ್ಟಿದ್ದು, ಪ್ರತಿ ತಿಂಗಳ 8 ಸಾವಿರ ರೂ. ಬಾಡಿಗೆಯನ್ನು ಎಲ್ಲರೂ ಹಂಚಿಕೊಂಡು ಭರಿಸುತ್ತಾರೆ. ರಂಗಸ್ವಾಮಿ, ಸುಮಿತ್ರಾ, ಶಿವರಾಮಯ್ಯ, ನಂಜುಂಡಸ್ವಾಮಿ, ಕುಮಾರ್, ನಟರಾಜು, ರುಕ್ಮಿಣಿ ಎಂಬ ಶಾಲಾ ಶಿಕ್ಷಕರು ನಿತ್ಯ ಎರಡು ತಾಸು ಮಕ್ಕಳಿಗೆ ಕಳೆದ ಎರಡು ತಿಂಗಳುಗಳಿಂದ ತರಬೇತಿ ಕೊಡುತ್ತಿದ್ದಾರೆ.
ನಾಗವಳ್ಳಿ, ಚಂದಕವಾಡಿ, ಕೋಳಿಪಾಳ್ಯ, ಅಮಚವಾಡಿ, ದೊಡ್ಡರಾಯಪೇಟೆ, ಕೆಲ್ಲಂಬಳ್ಳಿ, ದಡದಹಳ್ಳಿ ಸೇರಿದಂತೆ ಚಾಮರಾಜನಗರ ಜಿಲ್ಲಾ ಕೇಂದ್ರದ ವಿವಿಧ ಬಡವಾಣೆಗಳಿಂದ ಕನ್ನಡ ಮಾಧ್ಯಮದ 65 ಹಾಗೂ ಇಂಗ್ಲಿಷ್ ಮಾಧ್ಯಮ 45 ವಿದ್ಯಾರ್ಥಿಗಳು ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
15 ಮಂದಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು : ಶಾಲಾ ಮಕ್ಕಳಷ್ಟೇ ಅಲ್ಲದೇ ಈ ಅಧ್ಯಯನ ಕೇಂದ್ರದಲ್ಲಿ ಚಾಮರಾಜನಗರ ಜಿಲ್ಲೆಯ ವಿವಿಧ ಭಾಗಗಳಿಂದ 15ಕ್ಕೂ ಹೆಚ್ಚು ಕೆಪಿಎಸ್ಸಿ ವಿವಿಧ ಪರೀಕ್ಷೆಗಳು, ಪಿಎಸ್ಐ ಹುದ್ದೆ, ಕೆಎಎಸ್ ಬರೆಯುವವರು ಉಚಿತವಾಗಿ ವಾಸ್ತವ್ಯ ಹೂಡಿ ಅಭ್ಯಾಸ ನಡೆಸುತ್ತಿದ್ದು, ಇವರ ಅಧ್ಯಯನಕ್ಕೆ ಬೇಕಾದ ಸವಲತ್ತುಗಳನ್ನು ಕೂಡ ಸರ್ಕಾರಿ ನೌಕರರು ಭರಿಸುತ್ತಿದ್ದಾರೆ.
ಅಪರೂಪ ಹಾಗೂ ಮಾದರಿ ಕಾರ್ಯ : ಶಾಲಾ ಸಮಯ ಮುಗಿದ ಕೂಡಲೇ ಮನೆ ಸೇರುವ ಶಿಕ್ಷಕರ ನಡುವೆ ಬಾಡಿಗೆ ಮನೆ ಹಿಡಿದು, ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಎರಡು ತಿಂಗಳುಗಳಿಂದ ತರಬೇತಿ ಕೊಡುವುದು ಸಾಮಾನ್ಯ ಮಾತಲ್ಲ. ಟ್ಯೂಷನ್ ಹಾವಳಿಗೆ ಬ್ರೇಕ್ ಹಾಕಿ, ಬದ್ಧತೆಯಿಂದ ಕೆಲಸ ಮಾಡುತ್ತಿರುವ ಇವರ ಕಾಳಜಿ ನಿಜಕ್ಕೂ ಅಪರೂಪ ಹಾಗೂ ಮಾದರಿ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ