ಚಾಮರಾಜನಗರ: ಚೀಟಿ ಕಟ್ಟಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ಕೋವಿಡ್ ಬಲಿಯಾಗಿದ್ದು ಮೃತನ ಮಕ್ಕಳು ಹಣ ಕಟ್ಟಿದ್ದ ಜನರಿಗೆ ಕೋಟ್ಯಂತರ ರೂ. ವಂಚಿಸಿದ್ದಾರೆ ಎಂಬ ಆರೋಪ ಕೊಳ್ಳೇಗಾಲದಲ್ಲಿ ಕೇಳಿಬಂದಿದೆ.
ವಿ.ಟಿ.ಪಿ.ವಜೀರ್ ಎಂಬವರು ಚೀಟಿ ವ್ಯವಹಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪಟ್ಟಣದ ನೂರಾರು ಮಂದಿ ಚೀಟಿ ಹಾಕಿದ್ದರು. ಆದರೆ, ಈ ನಡುವೆ ವಜೀರ್ ಕೊರೊನಾಗೆ ಬಲಿಯಾಗಿದ್ದು, ಈತನ ನಿಧನದ ಬಳಿಕ ಮಕ್ಕಳು ಕಟ್ಟಿದ ಹಣ ನೀಡದೆ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಚೀಟಿ ನಡೆಸುತ್ತಿದ್ದ ವಜೀರ್ ತಮ್ಮ ಇಬ್ಬರು ಮಕ್ಕಳ ಮೂಲಕ ಹಣ ವಸೂಲಿ ಮಾಡಿಸುತ್ತಿದ್ದರಂತೆ. ವಜೀರ್ ನಿಧನವಾದಾಗ ಹಣ ಕಟ್ಟಿದ್ದ ಜನರು ಮಕ್ಕಳನ್ನು ಕೇಳಿದಾಗ ಕಾರ್ಯ ಮುಗಿಸಿ ಹಣ ನೀಡುವುದಾಗಿ ಹೇಳಿದ್ದರಂತೆ. ಆದರೆ ತಿಂಗಳು ಕಳೆದಂತೆ ಹಣ ಕಟ್ಟಿದವರಿಗೆ ವಜೀರ್ ಮಕ್ಕಳು ಮಾತು ಉಳಿಸಿಕೊಂಡಿಲ್ಲ. ಹೀಗಾಗಿ ಗಾಬರಿಗೊಂಡ ಹಣ ಕಟ್ಟಿರುವ ನೂರಾರು ಜನರು ಕೊಳ್ಳೇಗಾಲ ಪೊಲೀಸ್ ಠಾಣೆಗೆ ದೂರು ನೀಡಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಕೊಳ್ಳೇಗಾಲ ಪೊಲೀಸರು ವಜೀರ್ ಮಕ್ಕಳಾದ ಜಮೀರ್ ಪಾಷ ಹಾಗೂ ತನ್ವೀರ್ ಪಾಷರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಠಾಣೆ ಮುಂದೆ ನೂರಾರು ಮಂದಿ ಜಮಾಯಿಸಿದ್ದ, ಕಟ್ಟಿದ ಹಣ ವಾಪಸಾತಿಗೆ ಆಗ್ರಹಿಸಿದ್ದಾರೆ.