ಚಾಮರಾಜನಗರ: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಕರ್ನಾಟಕದಲ್ಲಿ ಚಾಮರಾಜನಗರ ಜಿಲ್ಲೆ ಆಯ್ಕೆಯಾಗಿದೆ. ರಾಜ್ಯದಿಂದ ಆಯ್ಕೆ ಆದ ಏಕೈಕ ಜಿಲ್ಲೆಯಾಗಿದ್ದು ಸಾವಿರಾರು ವಿಶೇಷಚೇತನರಿಗೆ ಇಂದು ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಅಲ್ಕಿಮೊ ಸಂಸ್ಥೆ, ಜಿಲ್ಲಾಡಳಿತ ಸಂಯುಕ್ತವಾಗಿ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 1693 ವಿಶೇಷ ಚೇತನರಿಗೆ ಡಿ. 24ರಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ ನಾರಾಯಣಸ್ವಾಮಿ, ಸಂಸದ ವಿ.ಶ್ರೀನಿವಾಸಪ್ರಸಾದ್ ಮತ್ತು ಸ್ಥಳೀಯ ಶಾಸಕರುಗಳು ವಿತರಣೆ ಮಾಡಿದರು.
ಸರ್ಕಾರದ ವತಿಯಿಂದ ವಿಶೇಷ ಚೇತನರಿಗೆ ನಡೆದ ದಕ್ಷಿಣ ಭಾರತದ ಬೃಹತ್ ಕಾರ್ಯಕ್ರಮ ಇದಾಗಿದ್ದು ಟ್ರೈಸಿಕಲ್, ಶ್ರವಣ ಸಾಧನ, ವಿಶೇಷ ಚೇತನ ಮಕ್ಕಳಿಗೆ ಕಿಟ್ ಸೇರಿದಂತೆ 16 ಬಗೆಯ 2755 ಸಾಧನಗಳನ್ನು ವಿತರಿಸಲಾಗಿದೆ, ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 1.20 ಕೋಟಿ ರೂ.ಗಳಾಗಿದೆ.
ಲೋಕಸಭಾ ಸದಸ್ಯ ವಿ. ಶ್ರೀನಿವಾಸಪ್ರಸಾದರ ವಿಶೇಷ ಕಾಳಜಿ ಹಾಗೂ ಮುತುವರ್ಜಿಯಿಂದ ಜಿಲ್ಲೆಯು ರಾಜ್ಯದಲ್ಲಿ ಆಯ್ಕೆಯಾಗಿದ್ದು ಪ್ರತಿ ಊರುಗಳಲ್ಲಿ ವಿಶೇಷ ಚೇತನರನ್ನು ಗುರುತಿಸಿ ಅವರಿಗೆ ಸಾರಿಗೆ ಸೌಲಭ್ಯ ಕಲ್ಪಿಸಿ ಸಾಧನಗಳನ್ನು ವಿತರಿಸಲಾಯಿತು.
ವಿಕಲತೆ ಶಾಪವಲ್ಲ: ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಿ ಸಚಿವ ನಾರಾಯಣಸ್ವಾಮಿ ಮಾತನಾಡಿ, ವಿಕಲತೆ ಎನ್ನುವುದು ಶಾಪವಲ್ಲ, ಯಾರ ಕರ್ಮದಿಂದಲೂ ಬಂದಿದ್ದಲ್ಲ ಎಂಬುದನ್ನು ಜನರು ಅರಿಯಬೇಕಿದೆ. ವಿಟಮಿನ್ ಕೊರತೆ, ಔಷಧಿಗಳ ಪರಿಣಾಮದಿಂದ ವಿಕಲತೆ ಉಂಟಾಗಲಿದ್ದು ದಿವ್ಯಾಂಗರ ಬಾಳಿಗೆ ಅಗತ್ಯ ನೆರವು ಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.
ಹುಟ್ಟುವಾಗಲೇ ಮೂಕ ಮಕ್ಕಳಾದರೇ ಹಿಂಜರಿಕೆ ಇಲ್ಲದೇ ವೈದ್ಯರನ್ನು ಸಂಪರ್ಕಿಸಬೇಕು, ಒಂದೆರೆಡು ವರ್ಷಗಳಲ್ಲಿ ಮಕ್ಕಳು ಮಾತನಾಡಲಿದ್ದು ಈ ಚಿಕಿತ್ಸೆಗೆ 7 ಲಕ್ಷ ರೂ. ವೆಚ್ಚ ಆಗಲಿದ್ದು ಕೇಂದ್ರ ಸರ್ಕಾರ ಕೊಡಲಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಡಿ ಬಹಳಷ್ಟು ಕಾರ್ಯಕ್ರಮಗಳಿದ್ದು ಪ್ರಚಾರದ ಕೊರತೆಯಿಂದಾಗಿ ಜನರಿಗೆ ತಲುಪುತ್ತಿಲ್ಲ.
ಜನಪ್ರತಿನಿಧಿಗಳಷ್ಟೇ ಅಧಿಕಾರಿಗಳದ್ದು ಜವಾಬ್ದಾರಿ ಇದೆ ಎಂಬುದನ್ನು ಅಧಿಕಾರಿಗಳು ಅರಿತರೇ ಹಲವು ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ಅಭಿಪ್ರಾಯಪಟ್ಟರು. ಚಾಮರಾಜನಗರ ಲೋಕಸಭಾ ಕ್ಷೇತ್ರದ 4 ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಇಂದು ವಿತರಣೆ ಮಾಡಿದ್ದು, ಇನ್ನುಳಿದ ನಾಲ್ಕು ಕ್ಷೇತ್ರಗಳಿಗೆ ನಂಜನಗೂಡಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್ ನೀಡಲು ಮುಂದಾದ ಅಭಿಮಾನಿಗಳು.. ಬಾದಾಮಿಯಿಂದಲೇ ಸ್ಪರ್ಧಿಸುವಂತೆ ದುಂಬಾಲು