ಚಾಮರಾಜನಗರ: ಬೆಕ್ಕು ಎಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ. ಅದರ ತುಂಟಾಟ, ಮನುಷ್ಯರೊಟ್ಟಿಗೆ ಒಗ್ಗುವ ಪರಿಯೇ ಒಂದು ವಿನೋದ. ಆದರೆ, ಇಲ್ಲೊಂದು ಬೆಕ್ಕಿಗೆ ಮನೆಯವರು ಮಗಳ ಸ್ಥಾನ ನೀಡಿದ್ದಾರೆ. ಹೌದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯಲ್ಲಿ ಶಿಕ್ಷಕರಾಗಿರುವ ವೆಂಕಟರಮಣಶೆಟ್ಟಿ ಹಾಗೂ ಇವರ ಪತ್ನಿ ನಿರ್ಮಲಾ ದಂಪತಿ ಸಾಕು ಬೆಕ್ಕಿಗೆ ಸೀಮಂತ ಕಾರ್ಯ ಮಾಡಿದ್ದಾರೆ.
ವೆಂಕಟರಮಣ ಹಾಗೂ ನಿರ್ಮಲಾ ಅವರಿಗೆ ಇಬ್ಬರು ಪುತ್ರರಿದ್ದು, ಮಗಳಿಲ್ಲ ಎಂಬ ಕೊರಗನ್ನು ಈ ಬೆಕ್ಕು ನಿವಾರಿಸಿದೆಯಂತೆ. ಆದ್ದರಿಂದಲೇ, ಬೆಕ್ಕು ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅದಕ್ಕಿಷ್ಟವಾದ ಆಹಾರ, ತಿನಿಸು ಕೊಟ್ಟು ವಿಶೇಷ ಆರೈಕೆ ಮಾಡುತ್ತಿದ್ದಾರೆ.
ಹೆಣ್ಣು ಮಕ್ಕಳಿಲ್ಲದ ಕಾರಣ ಪ್ರೀತಿಯಿಂದ ಹೆಣ್ಣು ಬೆಕ್ಕನ್ನು ಸಾಕಿ ಅದಕ್ಕೆ ಪ್ರೀತಿಯಿಂದ ಸುಬ್ಬಿ ಎಂದು ಹೆಸರಿಡಲಾಗಿದೆ. ಪ್ರತಿನಿತ್ಯ ಅದಕ್ಕೆ ಇಷ್ಟವಾದ ತಿನಿಸನ್ನು ಕೊಟ್ಟು ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಕ್ಕಳಿಗೆ ಸೀಮಂತ ಮಾಡುವ ಹಾಗೆ ಫಲ ತಾಂಬೂಲ, ತಿನಿಸುಗಳನ್ನು ಇಟ್ಟು ಹೊಸ ಬಟ್ಟೆ ತೊಡಿಸಿ ಸಂಪ್ರದಾಯದಂತೆ ಶಾಸ್ತ್ರ ಮಾಡಿ ಆರತಿ ಬೆಳಗಿ ಶುಭ ಹಾರೈಸಿದ್ದೇವೆ ಎಂದು ಶಿಕ್ಷಕ ವೆಂಕಟರಮಣ ಶೆಟ್ಟಿ ತಿಳಿಸಿದರು.
ಇದನ್ನೂ ಓದಿ: ಮುದ್ದಿನ ಶ್ವಾನಕ್ಕೆ ಅದ್ಧೂರಿ ಸೀಮಂತ ಕಾರ್ಯ ಮಾಡಿದ ನಿವೃತ್ತ ಪಿಎಸ್ಐ ಕುಟುಂಬ