ಚಾಮರಾಜನಗರ: ನಗರದ ಸ್ವಚ್ಛತೆಯನ್ನು ಕಾಪಾಡುವ ಪೌರ ಕಾರ್ಮಿಕರ ಕಾಲೋನಿಯಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದ್ದನ್ನು ಕಂಡ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಗರಂ ಆದರು.
ಇಂದು ಬೆಳಗ್ಗೆ ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡಿದ್ದ ವೇಳೆಯಲ್ಲಿ ಗಬ್ಬು ನಾರುತ್ತಿದ್ದ ಚರಂಡಿ, ತುಕ್ಕು ಹಿಡಿದಿದ್ದ ಬೀದಿ ದೀಪದ ಬಾಕ್ಸ್ ಗಳನ್ನು ಕಂಡು ನಗರಸಭೆ ಪೌರಾಯುಕ್ತ ರಾಜಣ್ಣ ವಿರುದ್ಧ ಅವರು ಹರಿಹಾಯ್ದರು. ಪೌರಕಾರ್ಮಿಕರ ಕಾಲೋನಿಗಳು ಸ್ವಚ್ಛವಾಗಿರತಕ್ಕದ್ದು, ಇಲ್ಲದಿದ್ದರೇ ಸಂಬಂಧಪಟ್ಟ ಅಧಿಕಾರಿಗಳಿಗೆ ಜೈಲು ಶಿಕ್ಷೆ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಇಂದೇ ನಿಮ್ಮನ್ನು ಜೈಲಿಗೆ ಕಳಿಹಿಸಬಹುದು, ಜೈಲಿಗೆ ಹೋಗೋಕೆ ರೆಡಿ ಇದ್ದರೆ ಕ್ಲೀನ್ ಮಾಡಿಸಬೇಡಿ, ಹೋಗಬಾರದು ಎಂದರೆ ಇಂದೇ ನೈರ್ಮಲ್ಯ ಕಾಪಾಡಿ ಎಂದು ಖಡಕ್ ಎಚ್ಚರಿಕೆ ಕೊಟ್ಟರು.
ಸ್ಥಳದಲ್ಲಿದ್ದ ಆಯೋಗದ ಅಧಿಕಾರಿಗಳಿಗೆ ಇದನ್ನೆಲ್ಲಾ ಫೋಟೋ ತೆಗೆದು ವರದಿ ಕೊಡಿ, ಪೌರಾಯುಕ್ತರಿಗೆ ಇಂದೇ ಕಾರಣ ಕೇಳಿ ನೋಟಿಸ್ ಕೊಡಿ ಎಂದು ಸೂಚಿಸಿದರು. ಇದಕ್ಕೂ ಮುನ್ನ ಪೌರಕಾರ್ಮಿಕರು ತಮಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು, ಒಂದೇ ಮನೆಯಲ್ಲಿ 5-6 ಕುಟುಂಬಗಳು ವಾಸಿಸುತ್ತಿದ್ದೇವೆ ಅಂದು ಅಳಲು ತೋಡಿಕೊಂಡಿದ್ದಕ್ಕೆ ಶೀಘ್ರ ನಿಮ್ಮ ಸಮಸ್ಯೆ ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.
ಓದಿ : ಅಡ್ಡದಾರಿ ಹಿಡಿದ ಚಾಲಕ.. ಮೆಟ್ರೋ ನಿಲ್ದಾಣದ ಅಂಡರ್ಪಾಸ್ನಲ್ಲಿ ಸಿಲುಕಿದ್ದ ವಾಹನ ತೆರವು
ಇದಕ್ಕೂ ಮುನ್ನ, ಚಾಮರಾಜೇಶ್ವರ ದೇವಾಲಯಕ್ಕೆ ಅಧಿಕಾರಿಗಳೊಂದಿಗೆ ತೆರಳಿದ ಶಿವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.