ಚಾಮರಾಜನಗರ: ವಿದ್ಯುತ್ ಬಿಲ್ ಪಾವತಿಯಾಗದಿದ್ದರಿಂದ ಐತಿಹಾಸಿಕ ಹಾಗೂ ಚಾಮರಾಜನಗರದ ಆರಾಧ್ಯ ದೈವ ಚಾಮರಾಜೇಶ್ವರನಿಗೆ ಗುರುವಾರ ಕತ್ತಲಲ್ಲಿ ಪೂಜೆ ಸಲ್ಲಿಸಲಾಗಿದೆ.
ನಗರದ ಹೃದಯಭಾಗದಲ್ಲಿರುವ ಚಾಮರಾಜೇಶ್ವರ ದೇಗುಲದ ವಿದ್ಯುತ್ ಬಿಲ್ನ್ನು ಮುಜರಾಯಿ ಇಲಾಖೆಯು ಬಾಕಿ ಉಳಿಸಿಕೊಂಡಿರುವುದರಿಂದ ಸೆಸ್ಕ್ ಸಿಬ್ಬಂದಿ ದೇಗುಲದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಭಕ್ತರು ಬ್ಯಾಟರಿ ಬೆಳಕಿನಲ್ಲೇ ದೇವರ ದರ್ಶನ ಪಡೆದಿದ್ದಾರೆ.
ಕಾರ್ತಿಕ ಮಾಸವಾಗಿರುವುದರಿಂದ ಶಿವನ ಭಕ್ತರು ಅದರಲ್ಲೂ ಮಹಿಳೆಯರು ಚಾಮರಾಜೇಶ್ವರನ ದರ್ಶನ ಮಾಡಲು ದಾಂಗುಡಿ ಇಡುತ್ತಿದ್ದರು. ಆದರೆ, ವಿದ್ಯುತ್ ಇಲ್ಲದಿರುವುದರಿಂದ ಮಹಿಳೆಯರು ದೇಗುಲದ ಹೊರಗೆ ಕೈ ಮುಗಿದು ಸೆಸ್ಕ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
60-70 ಸಾವಿರ ರೂ. ವಿದ್ಯುತ್ ಬಿಲ್ ಬಾಕಿ: ಈ ಹಿಂದೆಯೂ ವಿದ್ಯುತ್ ಕಡಿತಗೊಳಿಸಲು ಮುಂದಾದ ವೇಳೆ 15 ದಿನ ಕಾಲಾವಕಾಶ ಪಡೆದು ವಿದ್ಯುತ್ ಪಾವತಿ ಮಾಡಲಾಗಿತ್ತು. ಆದರೆ, ನಿನ್ನೆ ಸಂಜೆ 5 ರ ಹೊತ್ತಿಗೆ ವಿದ್ಯುತ್ ಕಡಿತ ಮಾಡಿದ್ದು 60-70 ಸಾವಿರ ರೂ. ವಿದ್ಯುತ್ ಬಿಲ್ ಬಾಕಿ ಇದೆ ಎಂದು ತಿಳಿದು ಬಂದಿದೆ.
ಐತಿಹಾಸಿಕ ದೇವಾಲಯ ಹಾಗೂ ಸಹಸ್ರಾರು ಭಕ್ತರ ಶ್ರದ್ಧಾ- ಭಕ್ತಿಯಿಂದ ಭೇಟಿ ಕೊಡುವ ಸ್ಥಳಕ್ಕೆ ಅಧಿಕಾರಿಗಳು ಈ ರೀತಿ ವರ್ತನೆ ತೋರಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 40 ವರ್ಷಗಳಿಂದ ದೇವಾಲಯದಲ್ಲಿ ಕೆಲಸ ಮಾಡಿಕೊಂಡಿದ್ದು ಇದೇ ಮೊದಲ ಬಾರಿಗೆ ಹೀಗೆ ಕತ್ತಲಲ್ಲಿ ದೇವರಿರುವುದು ಎಂದು ದೇಗುಲದ ನೌಕರ ಮಹಾದೇವಶೆಟ್ಟಿ ಬೇಸರ ಹೊರಹಾಕಿದರು.
ದೇವಾಲಯಕ್ಕೆ ಸೇರಿರುವ ಅಂಗಡಿಗಳಲ್ಲಿ ಬಾಡಿಗೆ ಪಡೆದು ಬೇಕಾದರೆ ವಿದ್ಯುತ್ ಬಿಲ್ ಕಟ್ಟಲಿ. ಬ್ಯಾಟರಿ ಹಿಡಿದುಕೊಂಡು ದೇವರ ದರ್ಶನ ಮಾಡುವ ದುಸ್ಥಿತಿ ಬೇಕೆ?, ಕತ್ತಲು ಆವರಿಸಿರುವುದರಿಂದ ನೂರಾರು ಮಹಿಳೆಯರು ದೇಗುಲದ ಒಳಗೆ ಬರದೇ ಹೊರಗೆ ನಿಂತು ಕೈ ಮುಗಿದು ಹೊರ ಹೋಗಿದ್ದಾರೆ ಎಂದು ಭಕ್ತರಾದ ಮಹಾದೇವ್ ಹೇಳಿದರು.
ಇದನ್ನೂ ಓದಿ: ಅಂಜನಾದ್ರಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಭೇಟಿ.. ಥೀಮ್ ಪಾರ್ಕ್ ನಿರ್ಮಾಣಕ್ಕೆ ಬೇಡಿಕೆ