ಚಾಮರಾಜನಗರ: ಎರಡನೇ ಬಲಿ ಪಡೆದು ಎಲ್ಲರನ್ನೂ ಬೆಚ್ಚಿ ಬೀಳಿಸಿರುವ ನರಭಕ್ಷಕ ಹುಲಿಯನ್ನು 48 ಗಂಟೆಯೊಳಗೆ ಸೆರೆ ಹಿಡಿಯಿರಿ ಇಲ್ಲ ಕೊಂದುಬಿಡಿ ಎಂದು ಅಡಿಷನಲ್ ಪಿಸಿಸಿಎಫ್ ಜಗತ್ ರಾಂ ಸೂಚಿಸಿದ್ದಾರೆ.
ಕಳೆದ 40 ದಿನಗಳಲ್ಲಿ ಇಬ್ಬರನ್ನು ಬಲಿ ಪಡೆದ ಹುಲಿರಾಯ, ಅರಣ್ಯ ಇಲಾಖೆ ಕಣ್ಣಿಗೆ ಕಾಣದೆ ಚಳ್ಳೇಹಣ್ಣು ತಿನಿಸಿದ್ದ. ಡ್ರೋಣ್‌ಗಾಗಲಿ, ಅಭಿಮನ್ಯು ಆನೆಗಾಗಲಿ ಹುಲಿ ಕುರುಹು ಪತ್ತೆಯಾಗದೇ ಇಂದು ಪ್ರತ್ಯಕ್ಷವಾಗಿ ಮತ್ತೆ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದ್ದಾನೆ.
ಗುಂಡ್ಲುಪೇಟೆಯಲ್ಲಿ ನರಭಕ್ಷಕ ಹುಲಿ ದಾಳಿಗೆ ಮತ್ತೊಬ್ಬ ಬಲಿ!
ಸೆ.1 ರಂದು ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಎಂಬವರನ್ನು ಹುಲಿ ಕೊಂದು ತಿಂದಿತ್ತು. ಬಳಿಕ, ಅರಣ್ಯ ಇಲಾಖೆ ಬರೋಬ್ಬರಿ 1 ತಿಂಗಳು ಕಾರ್ಯಾಚರಣೆ ಕೈಗೊಂಡಿದ್ದರು. ಇಂದು ದನ ಮೇಯಿಸುತ್ತಿದ್ದ ಶಿವಲಿಂಗಪ್ಪ ಅವರನ್ನು ಕೊಂದಿದ್ದರಿಂದ ಗ್ರಾಮಸ್ಥರ ತಾಳ್ಮೆಯ ಕಟ್ಟೆ ಒಡೆದು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದನ್ನು ಗಮನಿಸಿದ ಇಲಾಖೆಯ ಮೇಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.