ಚಾಮರಾಜನಗರ: ತುಮಕೂರು ಜಿಲ್ಲೆಯಲ್ಲಿ ನಿನ್ನೆಯಷ್ಟೇ ಭೀಕರ ಬಸ್ ಅಪಘಾತ ಸಂಭವಿಸಿ ಐದು ಮಂದಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಬೈಕ್ಗೆ ಡಿಕ್ಕಿ ತಪ್ಪಿಸಲು ಹೋಗಿ ಖಾಸಗಿ ಬಸ್ಸೊಂದು ಪಲ್ಟಿಯಾಗಿರುವ ಘಟನೆ ಹನೂರು ತಾಲೂಕಿನ ಕಾಮಗೆರೆ ಸಮೀಪ ಇಂದು ಸಂಭವಿಸಿದೆ.
ಸೋಮೇಶ್ಪುರದ ಚಂದ್ರು, ಮಂಜು, ಗೌರಮ್ಮ, ಚೆನ್ನನಿಂಗನಹಳ್ಳಿ ರಾಚಯ್ಯ, ಮಂಗಲ ಗ್ರಾಮದ ಕಾಶಿಫ್, ಬಾಣೂರು ಬಸವರಾಜಮ್ಮ, ಮೂಗೂರಿನ ತೇಜಸ್ವಿನಿ ಇತರರು ಗಾಯಾಳುಗಳಾಗಿದ್ದಾರೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೊಳ್ಳೇಗಾಲದ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಎದುರು ಬಂದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮುಂದಾದ ವೇಳೆ ರಸ್ತೆಯ ಬದಿಯ ಹಳ್ಳಕ್ಕೆ ಉರುಳಿದೆ.
ಬಸ್ ನಲ್ಲಿ 60 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಈ ಪೈಕಿ 11 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 9 ಮಂದಿ ಗಾಯಾಳುಗಳನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಬ್ಬರನ್ನು ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದೆ. ಬೈಕ್ ಸವಾರನಿಗೆ ತೀವ್ರವಾಗಿ ಪೆಟ್ಟಾಗಿದೆ. ಸದ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳುಗಳನ್ನು ಭೇಟಿ ಮಾಡಿದ ಶಾಸಕ.. ಬಸ್ ಅಪಘಾತದಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದವರನ್ನು ಶಾಸಕ ಆರ್. ನರೇಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದತ್ತೇಶ್, ಬಿಜೆಪಿ ಮುಖಂಡ ವೆಂಕಟೇಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ.
ಓದಿ: 'ಜೇನುನೊಣ ಕಡಿತದಿಂದ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು': ಠಾಣೆಗೆ ಬೆಂಕಿ ಹಚ್ಚಿ ಜನರ ಆಕ್ರೋಶ