ಚಾಮರಾಜನಗರ : ಶಾಸಕ ಎನ್ ಮಹೇಶ್ ಬಣದಲ್ಲಿ ಗುರುತಿಸಿಕೊಂಡು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದ ಕೊಳ್ಳೇಗಾಲ ನಗರಸಭೆಯ 7 ಮಂದಿ ಸದಸ್ಯರನ್ನು ಜಿಲ್ಲಾಧಿಕಾರಿ ಡಾ.ಎಂ ಆರ್ ರವಿ ಅನರ್ಹಗೊಳಿಸಿದ್ದಾರೆ.
ಇಂದು ನಡೆದ ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಆಲಿಸಿದ್ದ ಡಿಸಿ ಅವರು, ನಗರಸಭೆ ಅಧ್ಯಕ್ಷೆ ಗಂಗಮ್ಮ ಸೇರಿದಂತೆ ನಾಗಮಣಿ, ನಾಗಸುಂದ್ರಮ್ಮ, ಪ್ರಕಾಶ್ ಶಂಕನಪುರ ರಾಮಕೃಷ್ಣ, ನಾಸಿರ್ ಷರೀಫ್ ಹಾಗೂ ಪವಿತ್ರಾ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.
ಬಿಎಸ್ಪಿಯಿಂದ ಶಾಸಕ ಎನ್.ಮಹೇಶ್ ಉಚ್ಚಾಟನೆಗೊಂಡ ಬಳಿಕ ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ ಆನೆ ಗುರುತಿನಿಂದ ಗೆದ್ದಿದ್ದ 9 ಸದಸ್ಯರಲ್ಲಿ 7 ಮಂದಿ ಸದಸ್ಯರು ಮಹೇಶ್ ಹಿಂಬಾಲಿಸಿ ಅವರ ಬಣ ಸೇರಿಕೊಂಡು ಅಧ್ಯಕ್ಷ ಚುನಾವಣೆಯಲ್ಲಿ ಬಿಎಸ್ಪಿ ವಿಪ್ ಉಲ್ಲಂಘಿಸಿ ಬಿಜೆಪಿ ಪರ ಮತ ಚಲಾಯಿಸಿದ್ದರು.
ಈ ಸಂಬಂಧ ಬಿಎಸ್ಪಿ ಸದಸ್ಯೆ ಜಯಮೇರಿ ಅವರು ವಿಪ್ ಉಲ್ಲಂಘಿಸಿದ್ದರ ಬಗ್ಗೆ ಜಿಲ್ಲಾ ಮುಖ್ಯ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ನಡೆದಿತ್ತು.