ಚಾಮರಾಜನಗರ : ಲಾಕ್‌ಡೌನ್ ಬಳಿಕ ಮತ್ತೆ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗಿದ್ದು ಒಂದೇ ದಿನ 4 ಬಾಲ್ಯ ವಿವಾಹವನ್ನು ಮಕ್ಕಳ ಸಹಾಯವಾಣಿ ನಿಲ್ಲಿಸಿದೆ.
ಉತ್ತಂಬಳ್ಳಿ, ಚಾಮರಾಜನಗರ, ಯರಗನಹಳ್ಳಿ ಹಾಗೂ ಗುಂಡ್ಲುಪೇಟೆಯಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಗಳನ್ನು ಮಕ್ಕಳ ಸಹಾಯವಾಣಿ ತಂಡ ತಡೆದಿದ್ದು, ಈ ತಿಂಗಳಲ್ಲಿ ಬರೋಬ್ಬರಿ 16 ಮದುವೆಗಳನ್ನು ನಿಲ್ಲಿಸಲಾಗಿದೆ ಎಂದು ಮಕ್ಕಳ ಸಹಾಯವಾಣಿಯ ಲತಾ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ವಿವಾಹ ಕಾರ್ಯಗಳ ಕಾಲ ಇದಾಗಿರುವುದರಿಂದ ಮಕ್ಕಳ ಸಹಾಯವಾಣಿ ಹೆಚ್ಚು ಜಾಗೃತವಾಗಿದ್ದು 24*7 ಕಾರ್ಯ ನಿರ್ವಹಿಸುತ್ತಿದ್ದೇವೆ. ಕಳೆದ ಆಗಸ್ಟ್‌ನಲ್ಲಿ 10, ಸೆಪ್ಟೆಂಬರ್‌ನಲ್ಲಿ 9 ಮತ್ತು ನವೆಂಬರ್‌ನಲ್ಲಿ 11 ಮದುವೆಗಳನ್ನು ನಿಲ್ಲಿಸಿ ಆಯಾ ಊರಿನ ಮನೆ ಮನೆಗೆ ತೆರಳಿ ಬಾಲ್ಯ ವಿವಾಹದ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮೇ, ಜುಲೈ ಮತ್ತು ಆಗಸ್ಟ್‌ನಲ್ಲಿ 3 ಮದುವೆಯಾಗಿದ್ದು ಎರಡು ವಿವಾಹಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಲ್ಯ ವಿವಾಹ ನಡೆಯುವ ಕುರಿತು ಮಾಹಿತಿ ಇರುವವರು 1098 ಸಹಾಯವಾಣಿಗೆ ಕರೆ ಮಾಡಬೇಕು, ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಈಟಿವಿ ಭಾರತ ಮೂಲಕ ಮನವಿ ಮಾಡಿದರು. ಕೊರೊನಾ ಲಾಕ್‌ಡೌನ್ ವೇಳೆ ಜೋರಾಗಿದ್ದ ಬಾಲ್ಯ ವಿವಾಹ ಮತ್ತೆ ಮದುವೆ ಸೀಸನ್‌ನಲ್ಲಿ ಹೆಚ್ಚಾಗಿರುವುದು ಕಳವಳಕಾರಿ.