ಚಾಮರಾಜನಗರ: ದೇಹದ ಎಲ್ಲ ಅಂಗಗಳು ಸರಿ ಇದ್ದಾಗಲೇ ದುಡಿಯಲು ನೂರೆಂಟು ನೆಪ ಹೇಳುವವರ ನಡುವೆ ಈ ಯುವತಿ ನಿಜಕ್ಕೂ ಸ್ಪೂರ್ತಿ. ಇವರು ದೃಷ್ಟಿಯನ್ನ ಕಳೆದುಕೊಂಡಿರಬಹುದು ಆದರೆ ಸಾಧಿಸುವ ದೃಷ್ಟಿಕೋನವಂತೂ ಇದ್ದೇ ಇದೆ.
ಹೌದು, ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಗೌರಮ್ಮ ಎಂಬ 33 ವರ್ಷದ ಅಂಧ ಯುವತಿ ಸಾಧಿಸುವ ಛಲದಿಂದಲೇ ಖಾಸಗಿ ವಿದ್ಯಾರ್ಥಿಯಾಗಿ SSLC ಪರೀಕ್ಷೆ ಬರೆಯುತ್ತಿದ್ದು ಕಣ್ಣಿದ್ದೂ ಕನಸಿಲ್ಲದ ಹಲವರ ನಡುವೆ ವಿಭಿನ್ನವಾಗಿ ನಿಂತಿದ್ದಾರೆ.
ಅವರೆಲ್ಲ ಆಡಿಕೊಳ್ತಾರೆ ಅಂತಾ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದೆ:
ಗೌರಮ್ಮ 9 ನೇ ತರಗತಿಯಲ್ಲಿರಬೇಕಾದರೇ ಆಕಸ್ಮಿಕವಾಗಿ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಳ್ಳುತ್ತಾರೆ. ಕಣ್ಣು ಕಾಣುವುದಿಲ್ಲ ಎಂದರೆ ಸ್ನೇಹಿತರು ಆಡಿಕೊಳ್ಳುತ್ತಾರೆ ಎಂದು ಒಂದೂವರೆ ವರ್ಷ ತಮ್ಮ ಅಂಧತ್ವ ಮುಚ್ಚಿಟ್ಟು ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತಾರೆ. ಬಳಿಕ, ಕೆಲ ವರ್ಷಗಳ ಹಿಂದೆ ಇವರ ದೃಷ್ಟಿದೋಷ ಸಮಸ್ಯೆ ಅರಿತ ಮೊಬಿಲಿಟಿ ಇಂಡಿಯಾ ಸಂಸ್ಥೆ ಬೆಂಗಳೂರಿನಲ್ಲಿ ಗೌರಮ್ಮಗೆ ಒಂದು ವರ್ಷಗಳ ಕಾಲ ತರಬೇತಿ ನೀಡಿ ಬ್ರೈಲ್ ಲಿಪಿ, ಒಬ್ಬರೇ ಓಡಾಡುವುದನ್ನು ಕಲಿಸಿತಲ್ಲದೇ ಕೊನೆಗೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ನೌಕರಿಯನ್ನೂ ಕೊಡಿಸುತ್ತಾರೆ.
ನಾವೂ ಓದಬಹುದು ಎಂದು ತಿಳಿದಿದ್ದೇ ಆಗ:
ಈ ನಡುವೆ, ಇವರ ಅಂಧ ಸಹದ್ಯೋಗಿಗಳು SSLC ಪರೀಕ್ಷೆ ಬರೆಯಲು ಹುರಿದುಂಬಿಸಿದ್ದರಿಂದ ಈ ಬಾರಿ ಖಾಸಗಿ ವಿದ್ಯಾರ್ಥಿನಿಯಾಗಿ SSLC ಪರೀಕ್ಷೆ ಬರೆಯುತ್ತಿದ್ದಾರೆ. ಈ ಕುರಿತು ಗೌರಮ್ಮ, ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ಅಂಧರು ಕೂಡ ಓದಬಹುದೆಂದು ನಾನು ಬೆಂಗಳೂರಿಗೆ ಹೋದಾಗಲೇ ತಿಳಿದದ್ದು, ನನ್ನ ಸೀನಿಯರ್ಸ್ ಗಳು ಬಲವಂತ ಮಾಡಿ ಪ್ರೋತ್ಸಾಹಿಸಿದ್ದರಿಂದ ಪರೀಕ್ಷೆ ತೆಗೆದುಕೊಂಡೆ. ಹಲವರಿಗೆ ಕಾಲ್ ಮಾಡಿ ಮಾತನಾಡುವ ಮೂಲಕ ಪಠ್ಯಗಳನ್ನು ಕಲಿತಿದ್ದೇನೆ. ಲಾಕ್ಡೌನ್ ಇದ್ದಿದ್ದರಿಂದ ಬ್ರೈಲ್ ಲಿಪಿಯಲ್ಲಿ ಪಾಯಿಂಟ್ಸ್ ಮಾಡಿಕೊಂಡು ರಿವೈಸ್ ಮಾಡಿ ಉತ್ತಮವಾಗಿ 3 ವಿಷಯಗಳನ್ನು ಮಾಡಿದ್ದೇನೆ, sslc ಫಲಿತಾಂಶ ನೋಡಿಕೊಂಡು ಪಿಯು ಮಾಡುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೌರಮ್ಮನೇ ಮನೆಗೆ ಆಧಾರ : ಗೌರಮ್ಮನೇ ಮನೆಗೆ ಆಧಾರ ಎಂದರೆ ನಂಬಲೇಬೇಕು. ಗೌರಮ್ಮಳಿಗೆ ಮೂರು ಜನ ಅಕ್ಕಂದಿರಿದ್ದು ಎಲ್ಲರಿಗೂ ವಿವಾಹವಾಗಿದೆ. ಮದುವೆಗೆ ಮಾಡಿದ್ದ 3.5 ಲಕ್ಷ ರೂ. ಸಾಲವನ್ನು ಗಾರ್ಮೆಂಟ್ ನಲ್ಲಿ ದುಡಿದು ತೀರಿಸಿದ್ದಾರೆ. ಮನೆಯ ನಿತ್ಯದ ವ್ಯವಹಾರ ತನ್ನ ದುಡಿಮೆಯಿಂದಲೇ ನೋಡಿಕೊಳ್ಳುತ್ತಿರುವ ಗೌರಮ್ಮ ಮನೆಗೆ ಆಧಾರವಾಗಿದ್ದಾರೆ.
ಗಂಡು ಮಗನಂತೆ ಮನೆಗೆ ಆಸರೆ: ’’ಅಕ್ಕನ ಮಕ್ಕಳಿಗೆ ಬಟ್ಟೆ ತೆಗೆಯುವುದರಿಂದ ಹಿಡಿದು ನಮ್ಮ ಮನೆ ನೋಡಿಕೊಳ್ಳುತ್ತಿರುವುದು ಇವಳೇ, ನನಗೆ ಗಂಡು ಮಕ್ಕಳಿಲ್ಲ ಆದರೆ ಗಂಡು ಮಗನಿಗಿಂತ ಹೆಚ್ಚಾಗಿ ನಮ್ಮನ್ನು ಸಲುಹುತ್ತಿದ್ದಾಳೆ’’ ಎನ್ನುತ್ತಾರೆ ಗೌರಮ್ಮ ನ ತಾಯಿ ರತ್ನಮ್ಮ.
ಓದಬೇಕೆಂಬ ಹಠ ಸಾಧಿಸಬೇಕೆಂಬ ಛಲ ಇರಿಸಿಕೊಂಡಿರುವ ಗೌರಮ್ಮ ನಿಜಕ್ಕೂ ನಿರುದ್ಯೋಗಿ ಯುವಕರಿಗೆ, ಓದುವ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.