ಚಾಮರಾಜನಗರ: ಬಾಳು ಕೊಡುವುದಾಗಿ ವಿಧವೆಯನ್ನು ವರಿಸಿದ್ದ ಬಿಜೆಪಿ ಮುಖಂಡನೋರ್ವ 7 ವರ್ಷಗಳ ಬಳಿಕ ಆ ಮಹಿಳೆಗೆ ಕೈಕೊಟ್ಟಿರುವ ಆರೋಪ ಪ್ರಕರಣ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಹೌದು, ಮದುವೆಯಾಗಿ ಮಗುವಿದ್ದರೂ ಮಾಜಿ ಪರ್ತಕರ್ತ, ಬಿಜೆಪಿ ಮುಖಂಡ ಮನು ಶ್ಯಾನಬೋಗ್ ತನಗೆ ಕೈಕೊಟ್ಟು ಮತ್ತೊಂದು ಮದುವೆಯಾಗಿದ್ದಾರೆ ಎಂದು ಪತ್ನಿ ಶ್ವೇತಾ ಆರೋಪಿಸಿದ್ದಾಳೆ. ಈ ಕುರಿತು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬರಗಿ ಜಿ.ಪಂ. ಪರಾಜಿತ ಬಿಜೆಪಿ ಅಭ್ಯರ್ಥಿ ಎಂ. ಮನು ಶ್ಯಾನಭೋಗ್ ತನ್ನೊಂದಿಗೆ ವಿವಾಹವಾಗಿದ್ದು, ನಮ್ಮಿಬ್ಬರ ಮದುವೆಗೆ ಸಾಕ್ಷಿಯಾಗಿ ಗಂಡು ಸಹ ಮಗು ಸಹ ಇದೆ. ಇದೀಗ ಮನು ಮತ್ತೋರ್ವಳನ್ನು ಮದುವೆಯಾಗುವ ಮೂಲಕ ನನಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಗುಂಡ್ಲುಪೇಟೆ ಠಾಣೆಗೆ ದೂರು ನೀಡಿದ್ದರೂ ನ್ಯಾಯ ಒದಗಿಸಿಕೊಟ್ಟಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.
7 ವರ್ಷದ ಹಿಂದೆ ಮನು ಅವರನ್ನು ಪ್ರೀತಿಸಿ ಮಂಡ್ಯ ಜಿಲ್ಲೆಯ ಹನುಮಂತನಗರ ಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದೆ. ಸದ್ಯ ಗುಂಡ್ಲುಪೇಟೆ ತಾಲೂಕಿನ ಕೆಎಸ್‌ಎನ್ ಬಡಾವಣೆಯಲ್ಲಿರುವ ಮನೆಯಲ್ಲಿ ವಾಸವಿದ್ದು, 3 ವರ್ಷದ ಮಗ ಸಹ ಇದ್ದಾನೆ. ಈಗ ಮನು ತನ್ನ ವರಸೆ ಬದಲಿಸಿ, ಬೇರೆಯವಳ ಕೈಹಿಡಿಯುವ ಮೂಲಕ ಮೋಸ ಮಾಡಿದ್ದಾರೆ ನೊಂದ ಮಹಿಳೆ ಆರೋಪಿದ್ದಾಳೆ.
ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರೂ ಯಾವುದೇ ಉಪಯೋಗವಾಗಿಲ್ಲ. ಈಗಾಗಲೇ, ಆತ ಇನ್ನೊಂದು ಮದುವೆಯಾಗಿದ್ದು, ನನಗೆ ನನ್ನ ಪತಿ ಬೇಕು ಎಂದು ಮಹಿಳೆ ಒತ್ತಾಯಿಸಿದ್ದಾಳೆ.
ನೊಂದ ಮಹಿಳೆ ಶ್ವೇತಾ ನೇರಳೆ ಗ್ರಾಮದ ಶಿಕ್ಷಕರೊಬ್ಬರೊಂದಿಗೆ ವಿವಾಹವಾಗಿದ್ದಳು. ಅವರ ಅಕಾಲಿಕ ಮರಣದಿಂದ ಶ್ವೇತಾಳಿಗೆ ಸರ್ಕಾರಿ ನೌಕರಿ ಲಭಿಸಿತ್ತು. ಕೆಲವು ವರ್ಷಗಳ ಬಳಿಕ ಮನು ಶಾನಭೋಗ್ ಕಾಡಿಸಿ, ಪ್ರೀತಿಸಿ ಮಂಡ್ಯದ ಆತ್ಮಲಿಂಗೇಶ್ವರ ದೇಗುಲದಲ್ಲಿ ವಿವಾಹವಾಗಿದ್ದರು ಎಂದು ಮೂಲಗಳು ಖಚಿತಪಡಿಸಿವೆ.
ಮನು ಪ್ರತಿಕ್ರಿಯೆ ಏನು?
ನಾನು ಶ್ವೇತಾಳನ್ನು ಮದುವೆಯನ್ನೇ ಆಗಿಲ್ಲ. ನಾನು ರಾಜಕೀಯವಾಗಿ ಬೆಳೆಯುತ್ತಿರುವ ಹಿನ್ನೆಲೆ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಬೇಕಾದರೆ ಡಿಎನ್ಎ ಪರೀಕ್ಷೆ ಮಾಡಿಸಲಿ ಎಂದು ಮನು ಸವಾಲು ಹಾಕಿದ್ದಾರೆ.