ಚಾಮರಾಜನಗರ: ಟ್ರ್ಯಾಕ್ಟರ್ ಹರಿದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದಲ್ಲಿ ಸೋಮವಾರ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದ ಜಗದೀಶ್(27) ಮೃತ ದುರ್ದೈವಿ.
ಜಗದೀಶ್ಗೆ ಚಾಮುಲ್ನಲ್ಲಿ ನೌಕರಿ ಸಿಕ್ಕಿದ್ದು ಲಾರಿ ಚಾಲನೆಗೆ ಡಿಎಲ್ ಪಡೆಯಲು ಚಾಮರಾಜನಗರಕ್ಕೆ ಬರುತ್ತಿದ್ದರು. ಮಲೆಯೂರು ಸಮೀಪ ಬಿಳಿಕಲ್ಲು ತುಂಬಿಕೊಂಡು ತೆರಳುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್ ಸವಾರನ ಮೈಮೇಲೆ ಹರಿದು ಜಗದೀಶ್ ಸ್ಥಳದಲ್ಲೇ ಅಸುನೀಗಿದ್ದಾರೆ.
ಬೈಕ್ ಸವಾರ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ಟ್ರ್ಯಾಕ್ಟರ್ ಚಾಲಕ ರಸ್ತೆಯಲ್ಲಿ ಯಾರೂ ಓಡಾಡದಿರುವುದನ್ನು ಗಮನಿಸಿ ಬೇಲಿಯಲ್ಲಿ ಬಿದ್ದಿದ್ದ ಬೈಕನ್ನು ಸವಾರನ ಮೇಲೆ ತಂದಿರಿಸಿ ಸ್ವಯಂ ಅಪಘಾತವಾದಂತೆ ಬಿಂಬಿಸಿದ್ದಾನೆ. ಬಳಿಕ ಸೈಜ್ ಕಲ್ಲುಗಳನ್ನು ಪಕ್ಕದ ಜಮೀನಿನಲ್ಲಿ ಅನ್ ಲೋಡ್ ಮಾಡಿ, ಟ್ರ್ಯಾಕ್ಟರ್ ತೊಳೆದು ಕನಕಗಿರಿ ಬಳಿ ತಂದಿಟ್ಟು ಪರಾರಿಯಾಗಿದ್ದಾನೆ ಎಂದು ತೊರವಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ: ಕಾರು ನಾಲೆಗುರುಳಿ ಪಿಎಸ್‌ಐ, ಕಾನ್ಸ್‌ಟೇಬಲ್‌ಗೆ ಗಾಯ
ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಚಾಲಕನ ಗುರುತು ಪತ್ತೆಯಾಗಿಲ್ಲ. ಬಸವಶೆಟ್ಟಿ ಎಂಬುವವರಿಗೆ ಸೇರಿದ ಟ್ರ್ಯಾಕ್ಟರ್ ಎಂದು ತಿಳಿದುಬಂದಿದೆ. ಚಾಮರಾಜನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.