ಚಾಮರಾಜನಗರ: ರಾಜ್ಯವಷ್ಟೇ ಅಲ್ಲದೇ ದೇಶದೆಲ್ಲಡೆ ಜನಪ್ರಿಯ ಗಳಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಈಗ 50 ರ ಹೊಸ್ತಿಲಿಗೆ ಬಂದು ನಿಂತಿದ್ದು,ಸುವರ್ಣ ಸಂಭ್ರಮದ ಆಚರಿಸಿಕೊಳ್ಳುತ್ತಿದೆ. ಪ್ರಾಜೆಕ್ಟ್ ಟೈಗರ್ ನ ಮೊದಲ ಹುಲಿ ಸಂರಕ್ಷಿತ ಪ್ರದೇಶದಡಿ ಒಂದಾಗಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ವಿದೇಶಗಳಾಚೆಯೂ ತನ್ನ ಖ್ಯಾತಿಯನ್ನು ಪಸರಿಸಿದೆ.
ಬೆಂಗಾಲ್ ಟೈಗರ್ ಸಂರಕ್ಷಣೆ : ಬೆಂಗಾಲ್ ಟೈಗರ್ ಸಂತತಿ ಉಳಿಸಿ ಬೆಳೆಸಲು ಹಾಗೂ ಸಮತೋಲಿತ ಪರಿಸರ ಕಾಪಾಡುವ ಉದ್ದೇಶದಿಂದ 1973 ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ 9 ಕಡೆಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಣೆ ಮಾಡಿದ್ದರು. ಆ ಒಂಭತ್ತರ ಪಟ್ಟಿಯಲ್ಲಿ ಬಂಡೀಪುರವು ಅರಣ್ಯ ಪ್ರದೇಶವೂ ಒಂದು. ಅಂದು ಕೇವಲ 10-12 ಹುಲಿಗಳ ಸಂರಕ್ಷಣೆಯಿಂದ ಆರಂಭವಾಗಿದ್ದ ಬಂಡೀಪುರ ಅರಣ್ಯವಲಯ ಇಂದು ಹುಲಿಗಳದ್ದೇ ರಾಜ್ಯಭಾರ ಅನ್ನುವಷ್ಟು ಹತ್ತುಪಟ್ಟು ದ್ವಿಗುಣಗೊಂಡಿದೆ.
140ಕ್ಕಿಂತ ಹೆಚ್ಚು ಹುಲಿ ಸಮೀಕ್ಷೆ: ವನ್ಯಜೀವಿ ಬೇಟೆಗೆ, ಕಳ್ಳರಿಗೆ ಸೀಮಿತವಿದ್ದ ಅರಣ್ಯದಲ್ಲಿ 1973ರಿಂದ ಪರಿಣಾಮಕಾರಿ ವನ್ಯಜೀವಿ ಸಂರಕ್ಷಣೆಯಲ್ಲಿ ಸರಕಾರರ ಅರಣ್ಯವಿಭಾಗವು ತೊಡಗಿದೆ. ಅಂದು 10 ಹುಲಿಗಳಿದ್ದ ಕಾಡಲ್ಲಿ 2020ರಲ್ಲಿ 140ಕ್ಕೂ ಹೆಚ್ಚು ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. 2023 ರ ಮಾರ್ಚ್ ನಲ್ಲಿ ಇನ್ನು ಹೆಚ್ಚಾಗಿ ವ್ಯಾಘ್ರಗಳ ಸಂಖ್ಯೆ 150 ದಾಟಿದರೂ ಅಚ್ಚರಿ ಪಡಬೇಕಿಲ್ಲ ಎನ್ನಲಾಗುತ್ತಿದೆ.
ಮಾಂಸಹಾರಿ ಪ್ರಾಣಿಗಳಿಗೆ ಸಮೃದ್ಧತಾಣ : 13 ವಲಯ ಮೂರು ಉಪ ವಿಭಾಗ ಇರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಆನೆ ಶಿಬಿರವೂ ಇದ್ದು ತಮಿಳುನಾಡು ಮತ್ತು ಕೇರಳ ಗಡಿಯನ್ನು ಈ ಅರಣ್ಯ ಪ್ರದೇಶ ಹಂಚಿಕೊಂಡಿದೆ. 1200 ಚದರ್ ಕಿ.ಮೀ ವ್ಯಾಪ್ತಿಯ ಅರಣ್ಯದಲ್ಲಿ ಮಾಂಸಹಾರಿ ಪ್ರಾಣಿಗಳಿಗೆ ಅಗತ್ಯವಿದ್ದಷ್ಟು ಬೇಟೆಗೆ ಪ್ರಾಣಿಗಳು ವೃದ್ಧಿಗೊಂಡಿರುವುದು, ನೀರಿನ ಸಮಸ್ಯೆ ಬಾಧಿಸದಿರುವುದು, ಕಳ್ಳಬೇಟೆ ಕಡಿಮೆಯಾಗಿರುವುದು, ರಾತ್ರಿ ಸಂಚಾರ ನಿಷೇಧದಿಂದ ಪ್ರಾಣಿಗಳ ಓಡಾಟಕ್ಕೆ ನಿರಾಂತಕ ವಾತಾವರಣ ನಿರ್ಮಾಣ ಆಗಿರುವುದು ಬಂಡೀಪುರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
![Bandipur forest tiger](https://etvbharatimages.akamaized.net/etvbharat/prod-images/16887079_thu.jpg)
ವಿಭಿನ್ನ ಕಾರ್ಯಕ್ರಮ ಆಯೋಜನೆ: ಬಂಡೀಪುರ 50 ವಸಂತ ಪೂರೈಸಿರುವ ಹಿನ್ನೆಲೆ ಅರಣ್ಯ ಇಲಾಖೆಯಿಂದ ಮುಂದಿನ ತಿಂಗಳು ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಕಾಡು ಪ್ರಾಣಿಗಳ ಕುರಿತು ಸಾಕ್ಷ್ಯ ಚಿತ್ರ, ಪ್ರದರ್ಶನ, ಪರಿಸರ ಪ್ರಿಯರೊಂದಿಗೆ ಸಂವಾದ, ಅಧಿಕಾರಿಗಳಿಗೆ ಸನ್ಮಾನ, ಕಾರ್ಯಾಗಾರ ಸೇರಿದಂತೆ ಇನ್ನಿತರ ಹಲವು ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಿನ್ಸ್ ಟೈಗರ್ ರಾಜಕುಮಾರ: ಬಂಡೀಪುರದಲ್ಲಿ ಸಫಾರಿಯೂ ಆಕರ್ಷಣೆ ಕೇಂದ್ರವಾಗಿದೆ. ಇಲ್ಲಿಗೆ ದೇಶ, ವಿದೇಶಗಳಿಂದ ಜನರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಸಫಾರಿಗೆ ತೆರಳುತ್ತಾರೆ. ದಿನದ ಬೆಳಗ್ಗೆ ಮತ್ತು ಸಂಜೆ ಸಫಾರಿ ವ್ಯವಸ್ಥೆಯಿದ್ದು, ಬಂಡೀಪುರಕ್ಕೆ ಆದಾಯದ ಮೂಲ ಸಹ ಸಫಾರಿಯಾಗಿದೆ. ಇಲ್ಲಿ ಕೆಲವು ವರ್ಷಗಳ ಹಿಂದೆ ಇದ್ದ ಪ್ರಿನ್ಸ್ ಎಂಬ ಟೈಗರ್ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರಾಣಿಯಾಗಿತ್ತು. ಯಾರಿಗೂ ಹೆದರದೇ ಸಫಾರಿ ವಾಹನಗಳ ಸಮೀಪದಲ್ಲೇ ತುಂಟಾಟ ಆಡುತ್ತಿದ್ದ ಪ್ರಿನ್ಸ್ ಟೈಗರ್, ವಿದೇಶಗಳಲ್ಲೂ ರಾಜಕುಮಾರನಂತೆ ಹೆಸರುವಾಸಿ. ಪ್ರಿನ್ಸ್ ಟೈಗರ್ ನಿಜಕ್ಕೂ ಸಾವಿರಾರು ಪರಿಸರಪ್ರೇಮಿಗಳ ಮನ ಗೆದ್ದಿದ್ದಾನೆ.
ಇನ್ನು, ಬಂಡೀಪುರ ಅಭಯಾರಣ್ಯಕ್ಕೆ ಅರಣ್ಯ ಸಂರಕ್ಷಣೆಯಲ್ಲಿ ಶೇ 97.05ರಷ್ಟು ಅಂಕ ಸಿಕ್ಕಿದೆ. ಎನ್‌ಟಿಸಿಎಯು 60 ಮಾನದಂಡ ಪರಿಗಣಿಸಿ ಅಂಕ ನೀಡುತ್ತದೆ. ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಂಡೀಪುರಕ್ಕೆ ಮೊದಲ ಸ್ಥಾನ ಸಿಕ್ಕಿರುವುದು ಸುವರ್ಣ ಸಂಭ್ರಮದ ಕಳೆ ಹೆಚ್ಚಿದೆ.
ಇದನ್ನೂ ಓದಿ :ಅರುಣಾಚಲ ಪ್ರದೇಶದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ: ಆತಂಕದಲ್ಲಿ ಜನತೆ