ಚಾಮರಾಜನಗರ: ರಾಜ್ಯವಷ್ಟೇ ಅಲ್ಲದೆ ದೇಶದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತ ಸಿಎಫ್ಒ ಹುದ್ದೆ ಖಾಲಿ ಇದ್ದು, ಮೈಸೂರಿನ ಅಧಿಕಾರಿಗೆ ಹೆಚ್ಚುವರಿ ಜವಾಬ್ದಾರಿ ಕೊಟ್ಟಿರುವುದು ವನ್ಯಜೀವಿ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕದ ಉತ್ತಮ ಹುಲಿ ಸಂರಕ್ಷಿತ ಪ್ರದೇಶವೆಂದೇ ಕರೆಯಿಸಿಕೊಳ್ಳುವ ಬಂಡೀಪುರದಲ್ಲಿ 2013 ಹಾಗೂ 2019 ರಲ್ಲಿ ಭಾರಿ ಪ್ರಮಾಣದ ಬೆಂಕಿ ಅವಘಡ ಸಂಭವಿಸಿ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಹೊತ್ತಿ ಉರಿದಿರುವ ಇತಿಹಾಸವಿದೆ.
ಹೀಗಿರುವಾಗ ಬಂಡೀಪುರಕ್ಕೆ ಖಾಯಂ ಹುಲಿ ಯೋಜನಾ ನಿರ್ದೇಶಕರನ್ನು ನೇಮಿಸದಿರುವುದು ವನ್ಯಜೀವಿ ಪ್ರೇಮಿಗಳ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಸಿಎಫ್ ಹುದ್ದೆ ಅಷ್ಟೇ ಅಲ್ಲದೇ ಬಂಡೀಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ತಿಂಗಳಿನಿಂದ ಖಾಲಿ ಇದ್ದು, ಬಂಡೀಪುರದ ವಲಯ ಅರಣ್ಯ ಅಧಿಕಾರಿ ಹುದ್ದೆಯನ್ನು ಆರು ತಿಂಗಳಿನಿಂದ ಗೋಪಾಲಸ್ವಾಮಿ ಬೆಟ್ಟದ ಆರ್ಎಫ್ಒಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿರುವುದು ಅರಣ್ಯದ ಬಗೆಗಿನ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.
ಭ್ರಷ್ಟರನ್ನು ಬಿಟ್ಟು ಒಳ್ಳೆಯವರನ್ನು ನೇಮಿಸಿ: ಪರಿಸರ ಹೋರಾಟಗಾರ, ವನ್ಯಜೀವಿ ಮಂಡಲಿ ಮಾಜಿ ಸದಸ್ಯ ಜೋಸೆಫ್ ಹೂವರ್ ಈ ಸಂಬಂಧ ಮಾತನಾಡಿ, ಹಣ ಮಾಡಲು ಉತ್ಸುಕತೆ ತೋರುವ ಅಧಿಕಾರಿಗಳನ್ನು ಬಿಟ್ಟು ಉತ್ತಮ ಕರ್ತವ್ಯ ನಿರ್ವಹಣೆ ತೋರುವ ಅಧಿಕಾರಿಯನ್ನು ನೇಮಿಸಿ ಎಂದು ಸಿಎಂ ಬೊಮ್ಮಾಯಿ ಅವರಿಗೆ ಕಳೆದ 14 ರಂದು ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೊಂದು ಅವಘಡ ಉಂಟಾಗಲು ಅನುವು ಮಾಡಿಕೊಡುವ ಸರ್ಕಾರದ ನಡೆ ಸರಿಯಲ್ಲ. ನಮ್ಮ ಅಭಿವೃದ್ಧಿ, ಆರೋಗ್ಯ ಅರಣ್ಯ ಸಂರಕ್ಷಣೆ ಮೇಲೆ ನಿಂತಿದೆ ಎಂಬುದನ್ನು ಸರ್ಕಾರ ಮನಗಂಡು ಖಾಯಂ ಸಿಎಫ್ ಅನ್ನು ನೇಮಿಸಬೇಕೆಂದು ಜೋಸೆಫ್ ಆಗ್ರಹಿಸಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದು ಬೆಂಕಿ ತಡೆಗೆ ಫೈರ್ ಲೈನ್ ನಿರ್ಮಾಣ ಕೆಲಸ ಆರಂಭವಾಗಿದ್ದರೂ, ಕೆಳ ಹಂತದ ಅಧಿಕಾರಿಗಳೇ ಅದನ್ನು ನಿರ್ವಹಿಸುತ್ತಿದ್ದು, ಬಂಡೀಪುರದಲ್ಲಿ ಸದ್ಯಕ್ಕೆ ಗೊಂದಲ, ಅಯೋಮಯ ವಾತಾವರಣ ನಿರ್ಮಾಣವಾಗಿದೆ.